Tuesday, December 16, 2025

ಒಂಬತ್ತು ಗುಡ್ಡ




ಒಂಬತ್ತು ಗುಡ್ಡದ ಹತ್ತಿರದ ತಾಣ
ಖಾಸಗೀ ಎಸ್ಟೇಟು ತೋಟಗಳ ಕಣ
ಪರಿಚಯದವರಿಗೆ ಮಾತ್ರ ಸಿಗುವ ಆಹ್ವಾನ

ಮೊಬೈಲ್ ಜಾಲ ಇಲ್ಲದ ಕಾರಣ
ಸ್ತಬ್ಧ ಇಲ್ಲಿ ಅವುಗಳ ರಿಂಗಣ
ಪಸರಿಸಿದೆ ಶಾಂತತೆಯ ವಾತಾವರಣ

ಜುಯ್ಯ ಎನ್ನುವ ಕೀಟಗಳ ಮೊರೆತ
ಜಲಪಾತದ ನೀರಿನ ಭೋರ್ಗರೆತ
ಝರಿಗಳ ಜುಳುಜುಳು ನಿನಾದ ಕೇಳಲು ಬಲುಹಿತ

ಇದು ಹತ್ತಾರು ವನ್ಯಜೀವಿಗಳ ವಾಸಸ್ಥಾನ
ಸಾಹಸಮಯ, ಇಲ್ಲಿನ ಸ್ಥಳೀಯರ ಜೀವನ
ನಡೆಸುವರವರು ಕಾಡಿನೊಂದಿಗೆ ಸಹಜೀವನ

ಅಸಾಧ್ಯವಾದರೂ ಒಂಬತ್ತು ಗುಡ್ಡಗಳ ಆರೋಹಣ
ದೊರೆಯಿತು ಪ್ರಕೃತಿಯ ಸೂಕ್ಷ್ಮಾ ವಲೋಕನ
ಮರೆಯಲಾರದ ಸ್ಥಳೀಯರ ಅಕ್ಕರೆಯ ಔತಣ

ಎತ್ತಿನಭುಜ ಚಾರಣ

ಭೈರಾಪುರದ ಎತ್ತಿನಭುಜದಂತೆ ಕಾಣುವ ಬೆಟ್ಟ
ಸೆಳೆಯುವುದು ಚುಂಬಕದಂತೆ ಚಾರಣಿಗರನು ತನ್ನತ್ತ

ತುಸು ಕಾಡು ಹಾದಿಯನು ತುಳಿದು
ಒಂದೆರಡು ದಿಬ್ಬಗಳ ಮೇಲೆ ನಡೆದು

ಎದುರಲಿ ಕಾಣುವುದು ಕಲ್ಲಿನ ಬಂಡೆ
ಕೆಲವರಿಗೆ ಕಾಣುವುದು ಶಿವಲಿಂಗದಂತೆ

ಆಕಾಶ ಭೂಮಿಗಳ ಒಂದು ಮಾಡಿ ನಿಂತಂತೆ ಕಾಣುವ ನಂದಿ
ಅದರಡಿಯಲ್ಲಿ ನಾಣ್ಯದ ಭೈರವೇಶ್ವರ ದೇವನ ಸನ್ನಿಧಿ

Monday, October 20, 2025

ಮಧುಗಿರಿ ಕಾಡಿನ ಚಾರಣ




ಧನತ್ರಯೋದಶಿಯಂದು ದೊರೆಯಿತು ಬಂಗಾರ
ನೋಡಲು ಮಧುಗಿರಿಯ ಕಾಡಿನ ಶೃಂಗಾರ

ಹಣತೆಯಂತೆ ಕಂಗೊಳಿಸುವ ಬೆಟ್ಟಗಳ ಸಾಲು
ಆಕಾಶದೀಪದಂತೆ ಕಾಣುವ ಚಲಿಸುವ ಮೋಡಗಳು 

ಬಗೆ ಬಗೆ ಬಣ್ಣದ ಕಾಡಿನ ಹೂಗಳು 
ಬೆಟ್ಟದ ಮೇಲಿನ ಹಸುರಿನ ಬಯಲು 

ತಣಿಸಿದವು ಮೈ ಮನಗಳ ದಣಿವು 
ಇಮ್ಮಡಿಸಿತು ದೀಪಾವಳಿಯ ಸಂಭ್ರಮವು

Sunday, October 5, 2025

ಭರಚುಕ್ಕಿ ಗಗನಚುಕ್ಕಿ

ಭರಚುಕ್ಕಿ ಗಗನಚುಕ್ಕಿ 
ಧುಮುಕುತಿರುವಿರಿ ನೀವು ಸೊಕ್ಕಿ 
ನೋಡಲು ಕಣ್ಣೆವೆ ಇಕ್ಕಿ 
ಹರಿವುದು ಆನಂದವು ಉಕ್ಕಿ

ಬಳಸಿ ನಿಮ್ಮ ಜಲಶಕ್ತಿ 
ವಿಶ್ವೇಶ್ವರಯ್ಯನವರ ಯುಕ್ತಿ 
ತಯಾರಾಯಿತು ವಿದ್ಯುಚ್ಛಕ್ತಿ
ಮೊದಲಾಯಿತು ವಿದ್ಯುತ್ ಕ್ರಾಂತಿ

Monday, July 28, 2025

ಗೀಜಗ


ಹುಲ್ಲು ಕಡ್ಡಿಗಳ ಹೆಕ್ಕಿ 
ತೆಂಗಿನ ಗರಿಗೆ ಕೊಕ್ಕನು ಹಾಕಿ 
ಹಣೆದಿಹೆ ಮನೆಯನು ಜೋತ್ಹಾಕಿ

ಗೂಡದು ನೋಡಲು ಅಚ್ಚರಿ 
ಕಾಣದು ಒಳಹೋಗುವ ದಾರಿ 
ಆದರೂ ನೀ ಅದರೊಳು ಹೋಗುವೆ ಹಾರಿ 

ನೀನೇ ಜಗದ ಮೊದಲ ನೇಕಾರ 
ನೇಯರು ಯಾರೂ ನಿನ್ನಷ್ಟು ಸುಂದರ
ಕಟ್ಟಿಕೊಡು ನಮಗೂ ಒಂದು ಸೂರ

Monday, March 10, 2025

ಸಿದ್ಧರ ಬೆಟ್ಟ

ಇದು ರಸಸಿದ್ಧರ ಗುಹೆಗಳ ಬೀಡು
ಇಲ್ಲಿದೆ ಔಷಧೀಯ ಸಸ್ಯಗಳ ಕಾಡು 
ರಸದೌತಣ ನೀಡುವ ಹಕ್ಕಿಗಳ ಹಾಡು










ಸಿದ್ದೇಶ್ವರನ ಭಕ್ತರ ಸಂಖ್ಯೆ ಅಪಾರ
ಬರಿಗಾಲಿನಲಿ ಹತ್ತಿಳಿವರು ಮೆಟ್ಟಿಲುಗಳ ನೂರಾರ
ಲೆಕ್ಕಿಸದೆ ಬಿರು ಬೇಸಿಗೆಯ ಭಾರ












ದೊಣೆಯ ಸತ್ವಯುತ ನೀರಿನ ಸ್ನಾನ
ಬೆಟ್ಟದ ಸಿದ್ದೇಶ್ವರ ಸ್ವಾಮಿಯ ದರ್ಶನ
ಕೊಡುವುದು ನಂಬಿದವರ ರೋಗಗಳಿಗೆ ಉಪಶಮನ
ಕತ್ತಲೆಯ ಗುಹೆಗಳ ತಾಣ
ನಿಷ್ಯಬ್ದವಾದ ವಾತಾವರಣ
ನೀಡುವುದು ತಪಸ್ವಿಗಳಿಗೆ ಬೇಕಾದ ಕಣ



ಇಲ್ಲಿ ಸ್ವರ್ಣಮುಖಿ ನದಿ ಉದಿಸುವುದು ಮಳೆಗಾಲಕೆ
ಬೆಟ್ಟದ ಮೇಲಿದೆ ಕುರಂಗರಾಯನ ಕೋಟೆಯ ಪಳಿಯುಳಿಕೆ
ಕಲ್ಯಾಣಿ ಹಾಗೂ ಕಲ್ಲಿನಲಿ ಕೊರೆದ ಬಾವಿ ನೀರಿನ ಸಂಗ್ರಹಕೆ
ಬೆಂಕಿ ಬೀಳದಂತೆ ಕಾಡಿನ ರಕ್ಷಣೆ
ಭಕ್ತರ ಅನುಕೂಲತೆಗಳ ಸುಧಾರಣೆ
ಸಾಕು ಹೆಚ್ಚಿಸಲು ಇಲ್ಲಿನ ಆಕರ್ಷಣೆ

ಕೂಣಗಲ್ಲು ಬೆಟ್ಟ

ನಗರದ ಗದ್ದಲ ಗುಲ್ಲು
ಮರೆಯಾಗಿಸುವುದು ಕೂಣಗಲ್ಲು
ಮಧ್ಯಾಹ್ನದ ಬಿಸಿಲಿನ ಝಳದಲ್ಲು
ತಂಪು ಹೆಬ್ಬಂಡೆಗಳ ಗುಹೆಯ ಕಲ್ಲು

ತುದಿಯಿಂದ ಕಾಣುವುದು ಬೆಟ್ಟಗಳ ಸಾಲು
ನಡುವೆ ಮಾವು ತೆಂಗಿನ ತೋಟಗಳ ಬಯಲು 
ಪರಿಶುದ್ಧಗಾಳಿ ಉಸಿರಿಗೆ ಸಿಗಲು
ಮೂಡುವುದು ಪ್ರಶಾಂತ ಭಾವ ಎಲ್ಲರ ಮನದಲ್ಲು


ಬೆಟ್ಟಕ್ಕೆ ಹೋಗುವ ದಾರಿ ಕೆಪಿ ದೊಡ್ಡಿ ರಸ್ತೆ



ಹೆಬ್ಬಂಡೆಗಳ ನಡುವೆ ತಂಪಾದ ಗುಹೆ


ಆಂಜನೇಯ ದೇವಸ್ಥಾನ


ಬೆಟ್ಟದ ಮೇಲಿನ ನಂದೀಶ್ವರ























Sunday, January 26, 2025

ಹುತ್ತರೀದುರ್ಗದ ಗುಹೆ





















ಹುತ್ತರೀದುರ್ಗದ ಬೆಟ್ಟದ ತುದಿಗೆ
ಹತ್ತುವ ಮಾರ್ಗದ ಗುಹೆಗೆ
ಕವಿದಿದೆ ಕತ್ತಲೆ ಒಳಗೆ
ಹೊಕ್ಕು ಹತ್ತಿದರೆ ಮೆಲ್ಲಗೆ
ಕಾಣ್ವದು ಬೆಳಕಿನ ಕಿಂಡಿಯ ಜಾಗೆ
ಇದ್ದರೆ ಮೈ ತುಸು ಸಣ್ಣಗೆ
ನುಸುಳಲು ಬಹುದು ಕಿಂಡಿಯ ಒಳಗೆ
ಹೊರಬಂದು ನೋಡಲು ಹೊರಗೆ
ಕಲ್ಲು ಕಾಣುವುದು ಛಾವಣಿಯ ಹಾಗೆ
ಮೊಗದಲ್ಲಿ ಇಣುಕುವುದು ಕಿರುನಗೆ
ಮೇಲೆ ಹತ್ತಿದರೆ ಕಲ್ಲಿಗೆ ತಲೆಚಚ್ಚಿಕೊಳ್ಳದಂಗೆ!

Sunday, June 9, 2024

ಮಳೆ

ಮುಗಿಲಿನ ಅಂಚಲಿ ಕಾಣಲು ಮಿಂಚು
ಮೋಡವು ಗುಡುಗಿತು ಗುಡುಗುಡನೆ

ಮಳೆಯಲಿ ಸಿಕ್ಕರೆ ನಮಗೆ ತೊಂದರೆ
ಜನ ಮನೆಗೋಡಿತು ದುಡುದುಡನೆ

ಕಪ್ಪೇರಿದ ಮೋಡ ಮೇಲೇರಿತು ನೋಡ
ಮಳೆಯದು ಸುರಿಯಿತು ರಪರಪನೆ

ಭೂಮಿಗೆ ಜಳಕ ಮನದಲಿ ಪುಳಕ
ನೀರದು ಹರಿಯಲು ಜುಳುಜುಳನೆ

Sunday, December 4, 2022

ಸ್ಕಂದಗಿರಿ ಬೆಟ್ಟದ ಚಾರಣ


https://youtu.be/1mLLcvP4WQk

ಸ್ಕಂದಗಿರಿಯ ಅರುಣೋದಯ
ನೋಡಲು ಕಣ್ಣಿಗೆ ವಿಸ್ಮಯ
ಪದಗಳಲಿ ವರ್ಣಿಸಲು ಅತಿಶಯ

ಬೆಟ್ಟವೇರಲು ಬೇಕು ಧೃಡ ನಿಶ್ಚಯ
ಇದ್ದರೆ ಸಾಲದು ಬರಿ ಶಕ್ತಿ ಸಂಚಯ
ತಗ್ಗಿಬಗ್ಗಿ ಹತ್ತುವುದೊಂದೇ ಉಪಾಯ

ಬೆಟ್ಟದ ಮೇಲಣ ದೃಶ್ಯ ರುದ್ರ ರಮಣೀಯ
ಭಕ್ತಿಭಾವ ಮೂಡಿಸುವುದು ಪುರಾತನ ಶಿವಾಲಯ
ಈ ಚಾರಣದ ಅನುಭವ ಅವಸ್ಮರಣೀಯ


ಸೂರ್ಯೋದಯಕ್ಕೆ ಮೊದಲು

ಸೂರ್ಯನ ಮೊದಲ ಕಿರಣ

ಸೂರ್ಯೋದಯ


ಮೋಡಗಳ ನಡುವೆ

ಬೆಟ್ಟದ ಮೇಲಿನ ಶಿವಾಲಯ


Sunday, October 31, 2021

ಕನ್ನಡ(ದ) ಕಲಿ (ಯಾಗು) ಮಗುವೆ

ಬರೆದು ಕನ್ನಡದ ಕೈಯಾಗೂ
ಉಲಿದು ಕನ್ನಡದ ಬಾಯಾಗು
ಕೇಳಿ ಕನ್ನಡದ ಕಿವಿಯಾಗು
ಓದಿ ಕನ್ನಡದ ಕಣ್ಣಾಗು
ಮಗು ಕನ್ನಡದ ಕಲಿ ನೀನಾಗು

ಉದಾಸೀನರಿಗೆ ಉರಿಯಾಗು
ಕಿವುಡರಿಗೆ ಜಾಗಟೆಯಾಗು
ಅಂಧರಿಗೆ ಬೆಳಕಾಗು
ಮರೆತವರಿಗೆ ಗುರುವಾಗು
ಮಗು ಕನ್ನಡದ ಕಲಿ ನೀನಾಗು

Tuesday, August 10, 2021

ಮಕ್ಕಳ ಕಾಳಜಿ

ಕತ್ತಲೆಯಲ್ಲಿ ಹೋಗದಿರು
ಗಿಡಗಳನ್ನು ಮುಟ್ಟದಿರು
ಹುಳಗಳಿದ್ದರೆ ಕಚ್ಚುವವು
ಮುಳ್ಳುಗಳಿದ್ದರೆ ಚುಚ್ಚುವವು

ಮಳೆಯಲಿ ನೀನು ನೆನೆಯದಿರು
ಮರಗಳ ಕೆಳಗೆ ನಿಲ್ಲದಿರು
ನೆನೆದರೆ ಮೂಗು ಇಳಿಯುವುದು
ಮರಗಳಿಗೆ ಸಿಡಿಲು ಬಡಿಯುವುದು

ರಣರಣ ಬಿಸಿಲಲಿ ತಿರುಗದಿರು
ಐಸ್ ಕ್ಯಾಂಡಿಯನು ತಿನ್ನದಿರು
ಬಿಸಿಲಲಿ ತಲೆ ಸುತ್ತ ತಿರುಗುವುದು
ಐಸ್ ಕ್ಯಾಂಡಿ ಗಂಟಲು ಕಟ್ಟುವುದು

ಚಳಿಗಾಳಿಯಲಿ ಆಡದಿರು
ಮಣ್ಣಾಟಕೆ ಕೈ ಹಾಕದಿರು
ಚಳಿಯಲಿ ಕೆಮ್ಮುಂಟಾಗುವುದು
ಮಣ್ಣಾಟದಿ ತ್ವಚೆ ಬಿರಿಯುವುದು

ಪಾಲಿಸು ಮೇಲಿನ ಸಲಹೆಗಳ
ಶುಚಿಯಾಗಿಟ್ಟುಕೊ ಕೈಗಳ
ಆರೋಗ್ಯದಿ ನೀ ಬಾಳುವೆ
ಬಲಶಾಲಿಯಾಗಿ ಬೆಳೆಯುವೆ

Saturday, June 5, 2021

ವಿಶ್ವ ಪರಿಸರ ದಿನ

ಇಂದು ವಿಶ್ವ ಪರಿಸರ ದಿನ
ಬಲು ಸೂಕ್ಷ್ಮ ನೈಸರ್ಗಿಕ ವಾತಾವರಣ
ಅಡಗಿದೆ ಅದರೊಳು ಸಮತೋಲನ
ಆಗಲು ಮಾನವನ ಬುದ್ಧಿ ವಿಕಸನ
ತಪ್ಪಿದೆ ಅನಾದಿಕಾಲದ ಸಮತೋಲನ

ನಮ್ಮದು ಕ್ಷಣ ಮಾತ್ರದ  ಜೀವನ
ಕೈಲಾದಷ್ಟು ಗಿಡಮರಗಳ ಬೆಳೆಸೋಣ
ಬಳುವಳಿಯಾಗಿ ಸಿಕ್ಕ ಹಸಿರ ಹೆಚ್ಚಿಸೋಣ
ವಾತಾವರಣದ ಕಾಳಜಿ ಮಾಡೋಣ
ಸಿಕ್ಕಿದ್ದಕ್ಕಿಂತ ಚೆನ್ನಾಗಿಸಿ ಹೊರಡೋಣ

Thursday, May 27, 2021

ಬಲೆ


ಜೀವನದಲಿ ಸಿಕ್ಕಿ ಬಿದ್ದರೆ ಬಲೆಗೆ
ಸತತ ಪ್ರಯತ್ನವು ಬೇಕು ಬರಲು ಹೊರಗೆ
ಶರಣಾಗದಿರಲು ಜಯ ನಿನ್ನದೇ ಕೊನೆಗೆ

Saturday, March 27, 2021

ಚಿಗುರೆಲೆಗಳ ಸಂಸಾರ





ಚಿಗುರೆಲೆಗಳು ಹಾಕಿವೆ ಮದುವೆಯ ಚಪ್ಪರ
ನವಜೀವನಕೆ ಸಜ್ಜಾಗಿ ನಿಂತಿವೆ ಗಿಡಮರ
ಧರಿಸಿವೆ ರಂಗುರಂಗಿನ ಹೂಗಳ ಅಲಂಕಾರ
ಜೇನ್ನೊಣ ಜೀರುಂಡೆಗಳು ಪಠಿಸುತಿವೆ ಮಂತ್ರ
ವಾಲಗದಂತಿದೆ ಹಕ್ಕಿಗಳ ಸುಮಧುರ ಇಂಚರ
ಉದುರಿದ ಹಣ್ಣೆಲೆಗಳು ಉಣಬಡಿಸಿವೆ ರಸಸಾರ
ಚಿಗುರೆಲೆಗಳಿಂದಾಗುತಿದೆ ಹೂ ಪೀಚಿನ ಗೋಚರ
ಮಳೆಗಾಲವಿದ್ದರೂ ಬಲುದೂರ
ಹೂ ಕಾಯಿ ಮಾಡಿರುವವು ಹಣ್ಣಾಗುವ ನಿರ್ಧಾರ
ಹಣ್ಣಿಂದ ಪ್ರಾಣಿ ಪಕ್ಷಿಗಳು ಪೋಷಿಸುವವು ತಮ್ಮ ಉದರ
ಅವು ಪ್ರತ್ಯುಪಕಾರದಿ ಮಾಡುವವು  ಬೀಜಪ್ರಸಾರ
ಮಳೆಬರುವ ಕಾಲಕ್ಕೆ ಚಿಗುರೆಲೆಗಳಾಗುವವು ದಟ್ಟಹಸಿರ
ಕೊಡೆಹಿಡಿದು ಮಾಡುವವು ಮಳೆ ರಭಸವ ದೂರ 
ಮಣ್ಣ ರಕ್ಷಿಸಿ ಏರಿಸುವವು ಭೂಮಿಯ ಜಲಸ್ತರ
ಸೃಷ್ಟಿಸುವವು ತಮ್ಮಡಿಯಲ್ಲಿ ಹೊಸದೊಂದು ತಲೆಮಾರ
ಬೆಳೆಸುವವು ಸಂಸಾರ ಕಾಪಾಡುವವು ಜೀವನದ ಉಸಿರ

Monday, February 15, 2021

ಬಲ್ಲಾಳ ರಾಯನ ದುರ್ಗ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ

ಒಂದು ದಿನದ ಬಲ್ಲಾಳರಾಯನ ದುರ್ಗದ ಚಾರಣ
ಉಣಬಡಿಸಿತು ಪ್ರಕೃತಿ ಸೌಂದರ್ಯದ ಹೂರಣ
ಅಷ್ಟೇನು ಸುಲಭವಲ್ಲದ ಕಾರಣ
ಕೆಲವರಿಗೆ ಅದರಿಂದಾಯಿತು ಹೈರಾಣ
ಮತ್ತೆ ಕೆಲವರಿಗಾಯಿತು ಅದು ಶಕ್ತಿಯ ಮರುಪೂರಣ

ಮನಸೂರೆಗೊಂಡಿತು ಸೂರ್ಯನ ಉದಯ ಕಿರಣ
ಕಣ್ಣನು ತಣಿಸಿದವು ಹಸಿರನುಟ್ಟ ದಿಬ್ಬಗಳ ಗಣ
ಬಂಡಾಜೆ ಜಲಪಾತದ ಶೀತಲ ನೀರಿನ ಸತ್ವಗುಣ
ಮಿಂದವರಿಗೆ ನೀಡಿತು ಹೊಸಚೇತನ
ದಣಿದು ತನ್ನ ನೋಡ ಬಂದವರಿಗೆ ಅದು ನೀಡಿತು ಸಾಂತ್ವನ



ಸೂರ್ಯೋದಯದ ಸುಂದರ ನೋಟ




















ಚಾರಣಕ್ಕೆ ಹಾದಿ








ಚಾರಣಕ್ಕೆ ಹೋಗ ಬಯಸುವವರಿಗೆ ಮಾಹಿತಿ


ರಾಣಿ ಝರಿ ಸ್ಥಳದಿ೦ದ ಕಾಣುವ ವಿಹ೦ಗಮ ದೃಶ್ಯ

ರಾಣಿ ಝರಿ ಸ್ಥಳದಿ೦ದ ಕಾಣುವ ವಿಹ೦ಗಮ ದೃಶ್ಯ


ಕೋಟೆಯ ಕಡೆಗೆ ಹೊರಟಾಗ ಕಾಣುವ ದೃಶ್ಯ



















ಕೋಟೆಯ ಹತ್ತಿರದ ನೋಟ
















Sunday, November 15, 2020

ಚಿಗುರೆಲೆ



ಚಿಗುರಿದ ಎಲೆ ನೋಡಲದೆಷ್ಟು ಚಂದ
ಆಡುವನು ಅದರಲಿ ಹೂವಿನ ಕಂದ
ಅರಳಲು ಕೊಡುವನು ಮಕರಂದ
ಹೊರಸೂಸುವನು ಸುಗಂಧ
ಹೆಚ್ಚಿಸುವನು ತನ್ನೆಲೆಗಳ ಅಂದ





Friday, July 10, 2020

ಗುರು

ಕಲಿಕೆಗೆ ಸಾಧನಗಳು ಇರಬಹುದು  ನೂರು
ಅದರ ಅಡಿಪಾಯವ ಹಾಕುವವನೇ ಗುರು
ಗಟ್ಟಿಯಾಗಿದ್ದರೆ ಮರದ ಬೇರು
ಉರುಳದು ಗಾಳಿ ಬೀಸಿದರೂ ಜೋರು
ಬರವಿದ್ದರೂ ಬರುವುದು ಮರದಲ್ಲಿ ಚಿಗುರು

ಇತ್ತೀಚಿಗೆ ಹೆಚ್ಚಾಗಿದೆ ಕೊರೋನಾದ ಪೊಗರು
ಜೋರಾಗಿದೆ ಆನ್ಲೈನ್ ಗುರುವಿನ ಕಾರುಬಾರು
ಮಕ್ಕಳಿಗೆ ಪರದೆಯ ನೋಡಿ ಕಲಿಯಲು ಬೇಜಾರು
ಬೇಕೇನು ಕಂದಮ್ಮಗಳಿಗೆ ಈ ತರಹದ ಜೋರು
ಕಮರದಿರಲಿ ಕಲಿಕೆಯ ಚಿಗುರು

Sunday, May 31, 2020

ಮಹಾಭಾರತ

--------- ಭಾಗ 1---------

ಪ್ರತಿಜ್ಞೆಯ ಮಾಡಿದನು ಭೀಷ್ಮನು
ಸಂಸಾರವನ್ನೆಂದಿಗೂ ಹೂಡೆನು
ಸಿಂಹಾಸನವನ್ನೆಂದಿಗೂ ಏರೆನು
ನಾನೆಂದೂ ಹಸ್ತಿನಾಪುರದರಸರ ದಾಸನು
ಹೀಗೆಂದು ಸತ್ಯವತಿಯನು ಓಲೈಸಿದನು
ತಂದೆಯ ಜೊತೆ ಅವಳ ಲಗ್ನವ ಮಾಡಿದನು

ಶಂತನು ಸತ್ಯವತಿಯರಿಗಾಯಿತು ಪುತ್ರ ಸಂತಾನ
ಹಿರಿಮಗ ಚಿತ್ರಾಂಗದ ಮಡಿದನು ಮಾಡುತ ಕದನ
ಕಿರಿಮಗ ವಿಚಿತ್ರವೀರ್ಯ ಅಲಂಕರಿಸಿದನು ಸಿಂಹಾಸನ
ಕಾಶೀಕುವರಿಯರ ಜೊತೆ ಆಯಿತವನ ಲಗ್ನ
ಸಂತಾನವಿಲ್ಲದೇ ಹೊಂದಿದನು ಅವನು ಅಕಾಲ ಮರಣ
ಬರಿದಾಯಿತು ಉತ್ತರಾಧಿಕಾರಿಯಿಲ್ಲದೆ ಸಿಂಹಾಸನ

ಸತ್ಯವತಿಗೆ ಕಾಡಿತು ಹಸ್ತಿನಾಪುರದ ಉತ್ತರಾಧಿಕಾರಿಯ ಚಿಂತೆ
ಆದೇಶ ಕೊಟ್ಟಳು ಮಗ ವ್ಯಾಸರಿಗೆ ನಿಯೋಗ ಮಾಡುವಂತೆ
ಋಷಿಯ ರೂಪವ ಕಂಡು ಕಣ್ಣು ಮುಚ್ಚಿ ನಿಂತಳು ಅಂಬಿಕೆ
ಕುರುಡು ಮಗ ಧೃತರಾಷ್ಟ್ರನ ಹೆತ್ತಳು ಆಕೆ
ಋಷಿಯ ರೂಪವ ಕಂಡು ಬಿಳಿಚಿದಳು ಅಂಬಾಲಿಕೆ
ಬಿಳಿಚಿಕೊಂಡವನಂತಿದ್ದ ಪಾಂಡುವನ್ನು ಪಡೆದಳಾಕೆ

ಮತ್ತೊಮ್ಮೆ ಋಷಿಯೆಡೆಗೆ ತೆರಳಲು ಹೆದರಿದಳು ಅಂಬಿಕೆ
ಕಳಿಸಿದಳು ತನ್ನ ದಾಸಿಯನು ವ್ಯಾಸರೊಡನೆ ನಿಯೋಗಕೆ
ಋಷಿಯ ರೂಪವ ಕಡೆಗಣಿಸಿ ಸಹಜವಾಗಿದ್ದಳು ದಾಸಿ  
ಆರೋಗ್ಯವಂತ ಬುದ್ಧಿಮತಿಯಾದ ವಿದುರನ ಪಡೆದಳಾಕೆ
ಭೀಷ್ಮನು  ಆಸರೆಯಾಗಿ ನಿಂತನು ಸಿಂಹಾಸನಕೆ
ಧೃತರಾಷ್ಟ್ರ ಪಾಂಡು ವಿದುರರು ಬಂದರು ಪ್ರಾಯಕೆ

Tuesday, May 5, 2020

ಬ್ರಹ್ಮಕಮಲ




ಅರಳಿತು ಬ್ರಹ್ಮಕಮಲ ಸುಗಂಧವ ಬೀರುತ
ಬೆಳದಿಂಗಳ ತಂಪನು ಹೀರುತ
ಕಂಗೊಳಿಸಿದೆ ನಕ್ಷತ್ರದಂತೆ ಮಿನುಗುತ
ಒಂದು ರಾತ್ರಿ ಮಾತ್ರ ಅದು ಜೀವಿತ
ಅರ್ಥವಿಲ್ಲದ ನೂರು ದಿನಕ್ಕಿಂತ
ಅರ್ಥಪೂರ್ಣವಾದ ಒಂದು ದಿನ ಸಾಕೆನ್ನುತ