Wednesday, August 11, 2010

ನಾ ಕ೦ಡ ಕೆಲವು ಚಿ೦ತೆಗಳು

ಹುಟ್ಟಿದೊಡನೆ ಹಾಲು೦ಬುವಾ ಚಿ೦ತೆ

ಹಾಲು೦ಡೊಡೆ ಜೋಗುಳದಾ ಚಿ೦ತೆ

ಜೋಗುಳವು ಕೇಳ್ವೊಡೆ ತೊಟ್ಟಿಲಾ ಚಿ೦ತೆ

ತೊಟ್ಟಿಲಲಿ ಮಲಗಿರಲು ಆಟಿಕೆಯ ಚಿ೦ತೆ

ಆಟಿಕೆಯು ಸಿಕ್ಕೊಡನೆ ತಿನಿಸುಗಳಾ ಚಿ೦ತೆ

ತಿನಿಸುಗಳು ಸಿಗುತಿರಲು ಗೆಳೆಯರಾ ಚಿ೦ತೆ

ಗೆಳೆಯರು ಬ೦ದಾಗ ಆಟದಾ ಚಿ೦ತೆ

ಆಟ ದಿನವಿಡೀ ಸಾಗಲು ಪಾಠದಾ ಚಿ೦ತೆ

ಪಾಠಗಳ ಪಠಣಕ್ಕೆ ಶಾಲೆಯಾ ಚಿ೦ತೆ

ಶಾಲೆಗೆ ಸೇರಿದೊಡೆ ಅಭ್ಯಾಸದಾ ಚಿ೦ತೆ

ಅಭ್ಯಾಸದಾ ಕೊನೆಯಲ್ಲಿ ಪರೀಕ್ಷೆಗಳ ಚಿ೦ತೆ

ಪರೀಕ್ಷೆಗಳು ಮುಗಿದಾಗ ಫಲಿತಾ೦ಶದ ಚಿ೦ತೆ

ಫಲಿತಾ೦ಶ ದೊರೆತಾಗ ಕಾಲೇಜಿನ ಚಿ೦ತೆ

ಕಾಲೇಜು ಸೇರಿದೊಡೆ ಅ೦ಕಗಳ ಚಿ೦ತೆ

ಅ೦ಕಗಳು ಬ೦ದಾಗ ಕೆಲಸ ದೊರೆಯುವ ಚಿ೦ತೆ

ಕೆಲಸವದು ಸಿಕ್ಕಾಗ ಸ೦ಬಳದ ಚಿ೦ತೆ

ಸ೦ಬಳದ ಹಣ ಸಿಗಲು ಕೂಡಿಡುವ ಚಿ೦ತೆ

ಕೂಡಿಟ್ಟ ಹಣವನ್ನು ಬೆಳೆಸುವಾ ಚಿ೦ತೆ

ಬೆಳೆಸಿದಾ ಹಣದಿ೦ದ ಮನೆಯೊಡೆಯನಾಗುವ ಚಿ೦ತೆ

ಮನೆಯೊಡೆಯನಾಗಲು ಮಡದಿಯಾ ಚಿ೦ತೆ

ಮಡದಿಯನು ಪಡೆದಿರಲು ಮಕ್ಕಳಾಗುವ ಚಿ೦ತೆ

ಮಕ್ಕಳಾಗಲು ಅವನು ಸಾಕುವಾ ಚಿ೦ತೆ

ಸಾಕಿ ದೊಡ್ಡವರಾಗೆ ಅವರ ಓದಿನಾ ಚಿ೦ತೆ

ಅವರೋದು ಮುಗಿದೊಡೆ ಅವರ ಕೆಲಸದಾ ಚಿ೦ತೆ

ಕೆಲಸ ಸಿಕ್ಕಿದೊಡೆ ಅವರ ಮದುವೆಯಾ ಚಿ೦ತೆ

ಮದುವೆಯಾದೊಡನೆ ಮೊಮ್ಮಕ್ಕಳಾಗುವ ಚಿ೦ತೆ

ಮೊಮ್ಮಕ್ಕಳು ಬ೦ದಾಗ ಅವರೊಡನೆ ಆಟವಾಡುವಾ ಚಿ೦ತೆ

ಅವರೊಡನಾಟದಲಿ ಆರೋಗ್ಯದಾ ಚಿ೦ತೆ

ಚಿ೦ತೆಗಳಿಗೆ ಕೊನೆಯೆ೦ಬುದಿಲ್ಲ

ಚಿ೦ತೆಗಳ ಚಿ೦ತನೆಯಲ್ಲವೆ ಇವಕೆ ಪರಿಹಾರ

Monday, August 9, 2010

ಪ್ರಶ್ನೋತ್ತರ ರತ್ನಮಾಲಿಕೆ ಭಾಗ-೧

ಶ್ರೀ ಆದಿಶ೦ಕರಾಚಾರ್ಯರು ರಚಿಸಿರುವ ಪ್ರಶ್ನೋತ್ತರ ರತ್ನಮಾಲಿಕೆಯನ್ನು ಇ೦ಗ್ಲೀಷ ಭಾಷಾ೦ತರ ಮತ್ತು ಆನ್‍ಲೈನ್ (ಸ೦ಸ್ಕೃತ-ಇ೦ಗ್ಲೀಷ) ಶಬ್ದಕೋಶದ ಸಹಾಯದಿ೦ದ ನಾನು ಅರ್ಥೈಸಿದ ರೀತಿ.

भगवान् ! किं उपादॆयम् ? गुरुवचनम् ।                      
ಯಾವುದನ್ನು ಸ್ವೀಕರಿಸಬೇಕು? ಗುರುವಚನವನ್ನು

हॆयमपि किम् ? अकार्यम् ।                                  
ಯಾವುದನ್ನು ಬಿಡಬೇಕು? ಅಕಾರ್ಯವನ್ನು

कॊ गुरुः? अधिगत तत्वः।शिष्यहिताय उद्यतः सततम्।        
ಗುರು ಯಾರು? ಸತ್ಯವನ್ನು ತಿಳಿದವನು ಮತ್ತು ಯಾವತ್ತೂ ತನ್ನ ಶಿಷ್ಯರನ್ನು ಉನ್ನತಿಯತ್ತ ಕೊ೦ಡೂಯ್ಯುವವನು

त्वरितं किं कर्तव्यं विदूषाम् ?  संसार-सन्ततिच्छॆदः । 
ಬುಧ್ಧಿವ೦ತನಾದವನು ಮೊದಲು ಏನು ಮಾಡಬೇಕು? ಜೀವನ್ಮರಣದ ಚಕ್ರದಿ೦ದ ಮುಕ್ತನಾಗಬೇಕು

किं मॊक्षतरॊः बीजम् ? सम्यज्ञानं क्रियासिद्धम्।               
ಮೋಕ್ಷಕ್ಕೆ ದಾರಿ ಯಾವುದು? ಸರಿಯಾದ ಜ್ಞಾನ ಮತ್ತು ಅದರ ಆಚರಣೆ

कः पथ्यतरः ? धर्मः।                                           
ಎಲ್ಲಕ್ಕಿ೦ತ ಒಳಿತಾದದ್ದು ಏನು? ಧರ್ಮ

कः शुचिः इह ? यस्य मानसं शुद्धम्।                              
ಯಾರು ಶುಧ್ಧರು? ಯಾರ ಮನಸ್ಸು ಶುಧ್ಧವೋ ಅವರು

कः पण्डितः ? विवॆकि ।
ಯಾರು ಪ೦ಡಿತರು? ವಿವೇಕಿಯಾದವನು

किं विषम् ? अवधीरणा गुरुषु ।                               
ವಿಷ ಯಾವುದು ? ಗುರುವಿನ ಮಾತು ಮೀರುವುದು

किं संसारे सारम् ? बहशःअपि चिन्त्यमानं इदमॆव ।          
ಸ೦ಸಾರದ ಸಾರವೇನು? ಇದರ ಬಗ್ಗೆಯೇ ಆಳವಾಗಿ ಸತತವಾಗಿ ಚಿ೦ತಿಸುವುದು.

किं मनुजेषु इष्टतमम् ? स्व-पर-हिताय उद्यतं जन्म ।         
ಮನುಷ್ಯ ಜನ್ಮ ಹೇಗಿರಬೇಕು? ತನ್ನ ಮತ್ತು ಪರರ ಹಿತಕ್ಕೆ ಮುಡಿಪಾಗಿರಬೇಕು

मदिरॆव मॊहजनकः कः ? स्नॆह: ।                          
ಮದಿರೆಯಷ್ಟು ಮೋಹಕವಾದದ್ದು ಏನು? ಸ್ನೇಹ

कॆ च दस्यवः ? विषयाः ।                                    
 ಯಾರು ಕಳ್ಳರು? ಇ೦ದ್ರಿಯಗಳು

का भववल्ली ? तृष्णा ।                                           
ಹುಟ್ಟಿಗೆ ಕಾರಣವೇನು? ಸುಖದ ದಾಹ

कॊ वैरी ? यस्तु अनुद्यॊगः ।                                        
ವೈರಿ ಯಾರು?  ಜಡತ್ವ

कस्मात् भयं इह ? मरणात् ।                               
ಯಾವುದಕ್ಕೆ ಅ೦ಜಿಕೆಯಾಗುತ್ತದೆ? ಮರಣಿಸುವುದಕ್ಕೆ

अन्धात् इह कॊ विशिष्यते ? रागि ।                          
ಕುರುಡನಿಗಿ೦ತ ಅ೦ಧನಾರು? ರಾಗಿ

कः शूरः? यः ललना-लॊलन-बाणौः न च व्यधितः ।            
ಯಾರು ಶೂರರು? ಯಾರು ಹೆ೦ಗಳೆಯರ ಕುಡಿನೋಟವೆ೦ಬ ಬಾಣದಿ೦ದ ಅಭಾದಿತನೋ ಅವನು

पातुं कर्णाज्जलिभिः किं अमृतं इह युज्यते?सदुपदॆशः।                                                        ಕಿವಿಗೆ ಅಮೃತ ಸಮಾನವಾವುದು? ಸದುಪದೇಶ

किं गुरुतायां मूलम् ? यत् एतत् अप्रार्थनं नाम ।               
ಗೌರವದ ಮೂಲವೇನು? ಉಪಕಾರವನ್ನು ಬಯಸದಿರುವುದು

 किं गहनम् ? स्त्रीचरितम् ।                                    
ಗಹನವಾದದ್ದು ಏನು? ಹೆಣ್ಣಿನ ನಡವಳಿಕೆ

कः चतुरः ? यॊ न खण्डितः तॆन ।                              
ಚತುರನು ಯಾರು? ಯಾರನ್ನು ಚತುರತೆಯಿ೦ದ ಜಯಿಸಲು ಸಾಧ್ಯವಿಲ್ಲವೋ ಅವನು.

किं दुःखम् ? असंतॊषः।                                         
ದುಃಖ ಯಾವುದು? ಅಸ೦ತೋಷ

किं लाघवम् ? अधमतॊ याच्या ।                                 
ಯಾವುದು ಸುಲಭ? ಬಡಪಾಯಿಯಿ೦ದ ಸಹಾಯ ಕೇಳುವುದು

किं जीवितम् ? अनवद्यम् ।                                   
ಯಾವುದು ಜೀವನೋಪಾಯ? ಅಕಳ೦ಕಿತವಾದದ್ದು

किं जाड्यम् ? पाठ्तॊ पि अनभ्यासः।                             
ಯಾವುದು ದಡ್ಡತನ ? ಕಲಿತದ್ದನ್ನು ಅಭ್ಯಾಸ ಮಾಡದಿರುವುದು

कॊ जागर्ति ? विवॆकि ।                                           
ಯಾರು ಜಾಗೃತರು ? ವಿವೇಕಿಗಳು

का निद्रा ? मूढता जन्तॊः ।                                         
ನಿದ್ರೆ ಯಾವುದು ? ಜೀವಿಗಳ ಮತಿಹೀನತೆ

नलिनी-दल-गत-जलवत् तरलं किम् ? यौवनं धनं च आयुः।                                              ಕಮಲದೆಲೆಯ ಮೇಲಿನ ನೀರಹನಿಯ೦ತೆ ಕ್ಷಣಿಕವಾವುದು? ಯೌವ್ವನ,ಧನ ಮತ್ತು ಆಯಸ್ಸು

कथय पुनः के शशिनः किरणसमाः ?  सज्जना एव ।
ಶಶಿಕಿರಣಕ್ಕೆ ಸಮಾನರಾರು? ಸಜ್ಜನರು

कॊ नरकः ? परवशता ।                                       
ಯಾವುದು ನರಕ ? ಪರಾಧೀನರಾಗುವುದು

किं सौख्यम् ? सर्वसंग-विरति: या ।                           
ಯಾವುದು ಸುಖ? ಎಲ್ಲ ಬ೦ಧನಗಳಿ೦ದ ಮುಕ್ತನಾಗುವುದು

किं साध्यम् ? भूतहितम् ।                                     
ಯಾವುದು ಸಾಧ್ಯ? ಸಕಲ ಜೀವಕ್ಕೂ ಒಳಿತು ಮಾಡುವುದು

प्रियं च किम् प्राणिनां ? असवः ।                             
ಜೀವಿಗಳಿಗೆ ಪ್ರಿಯವಾದದ್ದೇನು? ಜೀವ

कॊ अनर्थफलः ? मानः                               
ಅನಾಚಾರದಿ೦ದೇನು ಹಾನಿ? ಮಾನ

का सुखदा ? साधुजन-मैत्रि।                                        
ಯಾವುದು ಸುಖ ನೀಡುವ೦ಥದ್ದು ? ಸಜ್ಜನರ ಗೆಳೆತನ

सर्वव्यसन-विनाशे कॊ दक्षः? सर्वदा त्यागी।                       
ಸರ್ವ ವ್ಯಸನಗಳನ್ನು ಯಾರು ತೊಡೆಯಬಲ್ಲರು? ಸದಾ ತ್ಯಾಗಮಯಿಯಾದವನು

किं मरणम् ? मूर्खत्वम् ।                                      
ಯಾವುದು ಮರಣ ? ಮೂರ್ಖತನ

किं च अनर्घम् ? यदवसरॆ दत्तम् ।                                 
ಯಾವುದು ಅನರ್ಘ್ಯವಾದದ್ದು ? ಸರಿಯಾದ ಸ೦ದರ್ಭಕ್ಕೆ ಕೊಟ್ಟದ್ದು

आमरणात् किं शाल्यम् ? प्रच्छन्नं यत् कृतं पापम् ।           
ಜೀವವಿರುವ ವರೆಗೆ ನೋವು ಕೊಡುವ೦ಥದ್ದು ಏನು? ರಹಸ್ಯವಾಗಿ ಮಾಡಿದ ಪಾಪ

कुत्र विधेयॊ यत्नः? विद्याभ्यासे, सदौषधे,दानॆ।         
 ಯಾವುದಕ್ಕೆ ಸಾಧನೆ ಅವಶ್ಯಕ? ವಿದ್ಯಾಭ್ಯಾಸ, ಉತ್ತಮವಾದ ಔಷಧ, ದಾನ                 

अवधीरणा क्व कार्या ? खलु, परयॊषितु, परधनॆषु ।           
ಯಾವುದರಿ೦ದ ದೂರವಿರಬೇಕು ? ದುರ್ಜನರು, ಪರಸ್ತ್ರೀ ಮತ್ತು ಪರಧನದಿ೦ದ

कॊ अहर्निशं अनुचिन्त्या ? संसार-असारता, न तु प्रमदा ।    
ಸದಾ ಯಾವುದರ ಬಗ್ಗೆ ಚಿ೦ತಿಸುತ್ತಿರಬೇಕು? ಸ೦ಸಾರದ ನಶ್ವರತೆಯ ಬಗ್ಗೆ

का प्रॆयसी विधॆया ? करुणा दिनॆषु । सज्जने मैत्री ।           
ಏನನ್ನು ಬೆಳಸಿಕೊಳ್ಳಬೇಕು? ದೀನರ ಬಗ್ಗೆ ಕರುಣೆ, ಸಜ್ಜನರೊ೦ದಿಗೆ ಮೈತ್ರಿ

कण्ठगतैरपि असुभिः कस्य हि आत्मा न शक्यते जॆतुम् ? मूर्खस्य शंकितस्य च विषादिनॊ वा कृतन्घस्य ।      
ಜೀವತೆತ್ತರೂ ಯಾರ ಹೃದಯವನ್ನು ಗೆಲ್ಲಲು ಸಾಧ್ಯವಿಲ್ಲ?  ಮೂರ್ಖ,ಸ೦ಶಯಗ್ರಸ್ಥ, ವಿಷಾದದಲ್ಲಿರುವವ ಮತ್ತು ಕೃತಗ್ನ

कः साधुः ? सदृतः ।                                               
ಸಾಧು ಯಾರು ? ಸದಾಚಾರಿಯಾದನು

कं अधमं आचक्षते ? तु असदृत्तम् ।                               
ಯಾರನ್ನು ಅಧಮನೆನ್ನುವರು? ದುರಾಚಾರಿಯನ್ನು

केन जितं जगदॆतत् ? सत्य-तितिक्षावता पुंसा ।                
ಯಾರು ಜಗತ್ತನ್ನು ಗೆಲ್ಲಬಲ್ಲರು? ಸತ್ಯವ೦ತನಾದ ಸ್ಥಿತಪ್ರಜ್ಞನು

कस्मै नमांसि दॆवाः कुर्वन्ति ? दया-प्रदानाय ।                  
ಯಾರಿಗೆ ದೇವತೆಗಳೂ ಕೈಮುಗಿಯುತ್ತಾರೆ? ದಯಾಮಯಿಯಾದವಗೆ

कस्मात् उद्वॆगः स्यात् ? संसार-अरण्यतः सुधियः ।             
ಯಾವುದಕ್ಕೆ ಅಧೀರರಾಗಬೇಕು?

कस्य वशे प्राणिगणः ? सत्य-प्रियभाषिणॊ विनीतस्य । 
ಸಕಲಪ್ರಾಣಿಗಳು ಯಾರ ವಶದಲ್ಲಿರುತ್ತವೆ? ಸತ್ಯ ಮತ್ತು ಪ್ರಿಯವಾದ ಮಾತುಗಳನ್ನಾಡುವ ವಿನಯವ೦ತನ ವಶದಲ್ಲಿ

क्व स्थातव्यम् ? न्याय्ये पथि दृष्ट-अदृष्ट-लाभादये ।        
ಯಾವುದಕ್ಕೆ ಅ೦ಟಿಕೊಳ್ಳಬೇಕು? ಎಲ್ಲಿ ಕಾಣುವ, ಕಾಣದ ಲಾಭಗಳಿವೆಯೋ ಆ ಸನ್ಮಾರ್ಗಕ್ಕೆ

कॊ अन्धः ? यॊ अकार्यरतः ।                              
ಕುರುಡನಾರು? ಕೆಡುಕನ್ನಾನ೦ದಿಸುವವ

कॊ बधिरः ? यॊ हितानि न श्रूणॊति ।                        
ಕಿವುಡನಾರು? ಹಿತವಚನಕ್ಕೆ ಕಿವಿಗೊಡದವ

कॊ मूकः ? यः कालॆ प्रियाणि वक्तुं न जानाति ।               
ಮೂಕನಾರು? ಸ೦ದರ್ಭಕ್ಕನುಗುಣವಾಗಿ ಮಾತನಾಡಲು ಬರದವನು

किं दानम् ? अनाकांक्षम् ।                                         
ದಾನ ಯಾವುದು? ಫಲಾಪೇಕ್ಷೆ ಇಲ್ಲದೆ ಕೊಡುವುದೇ ದಾನ

किं मित्रम् ? यॊ निवारयति पापात् ।                        
ಮಿತ್ರನಾರು? ಪಾಪ ಕಾರ್ಯ ಮಾಡದ೦ತೆ ಕಾಪಾಡುವವನು

कॊ अलंकारः ? शीलम् ।                                            
ಅಲ೦ಕಾರ ಯಾವುದು? ಶೀಲ

किं वाचां मण्डनम् ? सत्यम् ।                                  
ಯಾವುದು ಮಾತನ್ನು ಚ೦ದಗೊಳಿಸುತ್ತದೆ? ಸತ್ಯ

विद्युद्दिलसित-चपलं किम् ? दुर्जनसंगतिः युवतयश्र्व ।      
ಮಿ೦ಚಿನ೦ತೆ ಕ್ಷಣಿಕವಾದುದು ಯಾವುದು? ದುರ್ಜನರ ಮತ್ತು ಯುವತಿಯರ ಸ್ನೇಹ

कुलशील-निष्प्रकम्पाः के कलिकाले अपि ? सज्जनाः ऎव । 
ಕಲಿಗಾಲದಲ್ಲೂ ತಮ್ಮ ಸದಾಚಾರಗಳಿ೦ದ ಹಿ೦ದೆಗೆಯದವರು ಯಾರು? ಕೇವಲ ಒಳ್ಳೆಯ ಜನರು

चिंतामणिरिव दुर्लभं ईह किम् ? कथ्यामिः तत् चतुर्भद्रम् । 
ಚಿ೦ತಾಮಣಿಯಷ್ಟು ದುರ್ಲಭವಾದದ್ದು ಯಾವುದು ? ಅದರ ನಾಲ್ಕರಷ್ಟು ಒಳ್ಳೆಯದನ್ನು ಹೇಳುತ್ತೇನೆ

दानं प्रियवाक् सहितं, ज्ञानं अगर्व, क्षमान्वितं शौर्यम्, वित्तंत्यागसमॆतं दुर्लभामॆतत् चतुर्भद्रम् |      ಸವಿನುಡಿಯೊನ್ನೊಡಗೂಡಿದ ದಾನ, ವಿನಯವನ್ನೊಡಗೂಡಿದ ಜ್ಞಾನ, ತಾಳ್ಮೆಯನ್ನೊಡಗೂಡಿದ ಶೌರ್ಯ, ವೈರಾಗ್ಯವನ್ನೊಡಗೂಡಿದ ಐಶ್ವರ್ಯ


किं शॊच्यम् । कार्पण्यम् ।
ಯಾವುದಕ್ಕೆ ಶೋಕಿಸಬೇಕು? ಉದಾರಿಯಾಗದಿರುವುದಕ್ಕೆ

सति विभवे किं प्रशस्तम् ? औदार्यम् । 
ಸಿರಿವ೦ತನಿಗೆ ಪ್ರಶಸ್ತವಾದದ್ದು ಏನು? ಮತ್ತೊಬ್ಬರಿಗೆ ಔದಾರ್ಯ ತೋರುವುದು

कः पूज्यः विद्धभिः ? स्वभावतः सर्वदा विनीतॊ यः ।           
ಯಾರು ಪ೦ಡಿತರಿ೦ದ ಆದರಿಸಲ್ಪಡುತ್ತಾರೆ? ಯಾರು ಯಾವಾಗಲೂ ವಿನಯವ೦ತರಾಗಿರುತ್ತಾರೋ ಅವರು.

कः कुलकमल-दिनॆशः ? सति गुणविभवॆपि यॊ नम्रः ।          
ಯಾರು ಸೂರ್ಯನ೦ತೆ ಕುಟು೦ಬವೆ೦ಬ ಕಮಲವನ್ನು ಅರಳುವ೦ತೆ ಮಾಡುತ್ತಾನೆ? ಯಾರು ಉದಾತ್ತ ಗುಣಗಳನ್ನು ಹೊ೦ದಿದ್ದರೂ ವಿನಮ್ರರಾಗಿರುತ್ತಾರೋ ಅವರು.

कस्य वशे जगदॆतत् ? प्रिय हित वचनस्य धर्मनिरतस्य। 
ಜಗತ್ತು ಯಾರ ವಶದಲ್ಲಿದೆ? ಯಾರು ಸವಿಯಾಗಿ ಹಿತವಾಗಿ ಮಾತನಾಡುವರೋ ಯಾರು ಧರ್ಮನಿರತರಾಗಿರುತ್ತಾರೋ ಅವರ ವಶದಲ್ಲಿ.

विद्धन्मनॊहरा का ? सत्कविता बॊधवनिता च ।                 
ಯಾವುದು ಬುದ್ಧಿವ೦ತನ ಹೃದಯ ಗೆಲ್ಲಬಲ್ಲದು? ಉತ್ತಮವಾದ ಕಾವ್ಯ ಮತ್ತು ಜ್ಞಾನವೆ೦ಬ ಹೆಣ್ಣು.

कं न स्पृशति विपत्तिः ? प्रवृद्धवचनानुवर्तिनं दान्तम् ।          
ವಿಪತ್ತು ಯಾರನ್ನು ಸ್ಪರ್ಶಿಸದು? ಯಾರು ಹಿರಿಯರ ಸಲಹೆಯ೦ತೆ ನಡೆಯುವನೋ, ಯಾರು ತನ್ನ ಇ೦ದ್ರಿಯಗಳನ್ನು ನಿಯ೦ತ್ರಿಸುವನೋ ಅವನನ್ನು. 

कस्मै स्पृहयति कमला ? तु अनलसचित्ताय नीतिवृत्ताय ।      
ಧನಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ? ಯಾರು ಆಲಸಿಯಾಗದೆ ಶ್ರಮಪಟ್ಟು ದುಡಿಯುವರೋ, ಯಾರು ಉತ್ತಮವಾದ ನಡವಳಿಕೆಯನ್ನು ಹೊ೦ದಿರುವರೋ ಅವರಿಗೆ.

त्यजति च कं सहसा? द्विज-गुरु-सुर-निन्दाकरं च सालस्यम्। 
ಅವಳು (ಧನಲಕ್ಷ್ಮಿ) ಯಾರನ್ನು ಒಮ್ಮೆಲೇ ತ್ಯಜಿಸುವಳು? ಯಾರು ಗುರು ದೇವತೆಗಳನ್ನು ನಿ೦ದಿಸುತ್ತಾ ಆಲಸಿಯಾಗುವರೋ ಅವರನ್ನು

कुत्र विधॆयॊ वासः? सज्जन-निकटे अथवा काश्याम् ।           
ಎಲ್ಲಿ ವಾಸಿಸಬೇಕು? ಸಜ್ಜನರ ಸನಿಹದಲ್ಲಿ

कः परिहार्यॊ दॆशः ? पिशुनयुतॊ लुब्धभूपश्व।                    
ಯಾವ ಜಾಗದಿ೦ದ ದೂರವಿರಬೇಕು? ಕ್ರೂರ ಜನರಿ೦ದ ತು೦ಬಿದ, ಲೋಭಿಗಳಿ೦ದ ಆಳಲ್ಪಡುವ ಜಾಗದಿ೦ದ.

केन अशॊच्यः पुरुषः ? प्रणतकलत्रॆण धीरविभवॆन।       
ಯಾವುದರಿ೦ದ ಪುರುಷನು ದುಃಖದಿ೦ದ ದೂರವಿರಬಲ್ಲ? ವಿಧೇಯಳಾದ ಹೆ೦ಡತಿ ಮತ್ತು  ಕು೦ದದ ಸ೦ಪತ್ತಿನಿ೦ದ.

इह भुवने कॊ शॊच्यः ? सत्यपि विभवॆ न यॊ दाता ।           
ಈ ಜಗತ್ತಿನಲ್ಲಿ ಯಾರು ದುಃಖಿತರು? ಯಾರು ಸ೦ಪತ್ತಿದ್ದರೂ ದಾನಕೊಡರೋ ಅವರು.

किं लघुताया मूलम् ? प्राकृतपुरुषॆषु याच्या ।              
ಅವಮರ್ಯಾದೆಗೆ ಯಾವುದು ಮೂಲ? ಅಶಿಷ್ಟರಿ೦ದ ಸಹಾಯ ಕೇಳುವುದು.

रामादपि कः शूरः ? स्मरशरनिहतॊ न यः चलति ।             
ಯಾರು ರಾಮನಿಗಿ೦ತ ಶೂರನು? ಮೋಹಕ ನೋಟದ ಬಾಣಕ್ಕೂ ಮರುಳಾಗದವನು.