Thursday, March 19, 2020

ಪಟ್ಟಣದ ಜೀವನ


ದೂರದ ಹಳ್ಳಿಯಲ್ಲಿ ಹುಟ್ಟಿರುವೆ
ಪಟ್ಟಣದ ಕಾಂಕ್ರಿಟ್ ಕಾಡಲಿ ನೆಲೆಸಿರುವೆ
ಸಿಕ್ಕ ಸಾರವನು ಹೀರಿರುವೆ
ಅದರಿಂದ ಅರಳಿ ನಿಂತಿರುವೆ

ಇಲ್ಲಿದೆ ಹೊಗೆ ಧೂಳಿನ ಚೆಲ್ಲಾಟ
ನೀರಿಗೆ ಪ್ರತಿದಿನ ಗೋಳಾಟ
ಬಗೆಬಗೆ ರೋಗಗಳ ಕಾಟ
ಬೇಗನೆ ಕಿತ್ತು ಇಲ್ಲಿಂದ ಗೂಟ

Wednesday, March 18, 2020

ಕರೋನಾ ಕೋವಿಡ್ ಹತ್ತೊಂಬತ್ತು ಮತ್ತು ಜಗತ್ತು

ಎಲ್ಲೋ ಇದ್ದ ಕೋವಿಡ್ ಹತ್ತೊಂಬತ್ತು
ಹೊಕ್ಕಿದೆ ಮಾನವರ ಜಗತ್ತು

ತಂದಿದೆ ಎಲ್ಲೆಡೆ ಆಪತ್ತು
ಬೀಳಿಸಿದೆ ಎಲ್ಲರನ್ನು  ಬೇಸ್ತು

ದಿಗಿಲಾಗಿದೆ ಮುಟ್ಟಲು ಯಾವುದೇ ವಸ್ತು
ಎಲ್ಲರಿಗೂ ಕೈ ತೊಳೆದು ತೊಳೆದು ಸುಸ್ತು

ಬಿಕರಿಯಾಗದೇ ಕುಳಿತಿವೆ ನೂರಾರು ವಸ್ತು
ಅದು ತರಬಹುದು ಹಲವರ ನೌಕರಿಗೆ ಕುತ್ತು

ಸರಕಾರ ವಿಧಿಸಿದೆ ಹಲವಾರು ಷರತ್ತು
ಸಾಕಾಗಿದೆ ಎಲ್ಲರಿಗೂ ಮನೆಯಲಿ ಕುತ್ತುಕುತ್ತು

Tuesday, March 17, 2020

ಯುಗಾದಿಯ ಆಗಮನ



ಬೇಸಿಗೆಯ ಬಿರು ಬಿಸಿಲಿನಲಿ
ಚಿಗುರೆಲೆಗಳ ಸೇರಿಸಿ ಹೆಣೆದ ಬಟ್ಟೆಯಲಿ
ಮಾಡಿದ ಕೊಡೆಯನು ಹಿಡಿದು ನಿಂತಿವೆ ಬಳುಕುತಲಿ
ನಮ್ಮ ಬದುಕಿಸಿ ನೀ ಬದುಕು ಎನ್ನುತಲಿ

ಬೆವರಹನಿಯ ಗಾಳಿಯಲಿ ತೇಲಿಸಿ
ಬೇಸಿಗೆಯ ಧಗೆಯನು ಉಡುಗಿಸಿ
ಮುಡಿಗೇರಿಸಿದ ಹೂಗಳ ಕಂಪನು ಸೂಸಿ
ನಿಂತಿವೆ ಯುಗಾದಿಯ ಆಗಮನಕೆ ಕಾತರಿಸಿ

Wednesday, March 11, 2020

ಹೋಳಿ ಹಬ್ಬ

ಇರಲಿ ಯಾವುದೇ ಪೋಷಾಕು
ಧರಿಸು ಬಣ್ಣಗಳ ಮುಸುಕು
ಸಿಟ್ಟು ಸೆಡೆಗಳ ಬಿಸಾಕು
ಬಂಧುಮಿತ್ರರಿಗೆ ಬಣ್ಣವ ಹಾಕು
ದುಃಖ ದುಮ್ಮಾನಗಳನು ನೂಕು
ಸಿಹಿತಿನಿಸುಗಳ ಮೆಲುಕು ಹಾಕು
ಇದಕ್ಕೆಲ್ಲ  ಹೋಳಿಹಬ್ಬವೇ ಬೇಕು


ಹುಣ್ಣಿಮೆ ಚಂದಿರ ಬಣ್ಣವ ತಂದನು 
ಹೋಳಿಯ ಆಟವ ಆಡಿಸಲು
ನಮ್ಮನ್ನು ಮುಳುಗಿಸಿ ಬಣ್ಣದಲಿ
ತಾ ನಗುತಿಹನು ಶ್ವೇತ ವರ್ಣದಲಿ