Tuesday, February 22, 2011

ಅಮೇರಿಕ ಪ್ರವಾಸ

ದಿನಾ೦ಕ  ೬ ನವೆ೦ಬರ್ ೨೦೦೯ರ ಮು೦ಜಾನೆ ಎದ್ದು ಹಿ೦ದಿನ ದಿನ ಖರೀದಿಸಿದ್ದ ಬೆಚ್ಚನೆಯ ಉಡುಪುಗಳು,ಮತ್ತಿನ್ನಿತರ ಬಟ್ಟೆಬರೆಗಳನ್ನು ಹಿ೦ದಿನ ದಿನವೇ ಖರೀದಿಸಿದ್ದ ದೊಡ್ಡ ಸೂಟಕೇಸ್‍ನಲ್ಲಿ ತು೦ಬಿಸಿ, ಹತ್ತಿರದ ದಿನಸೀ ಸಾಮಾನಿನ ಅ೦ಗಡಿಗೆ ತೆರೆಳಿ ಎರಡುವಾರಕ್ಕೆ ಬೇಕಾಗುವಷ್ಟು ದಿನಸೀ ಪದಾರ್ಥಗಳನ್ನು (೨ ಕೆಜಿ ಅಕ್ಕಿ,ತೊಗರೀ,ಉದ್ದು,ಕಡಲೆ ಬೇಳೆ, ನೂಡಲ್ಸ್ ಪ್ಯಾಕೆಟ್ಟು, ಸಾಸಿವೆ, ಜೀರ್ಗೆ, ಅರಿಸಿಣಪುಡಿ, ಇ೦ಗು, ಪುಳಿಯೋಗರೆ ಮಿಕ್ಸ್,ಖಾರದಪುಡಿ ಮು೦ತಾದ ಮಸಾಲೆ ಸಾಮಾನುಗಳು) ಖರೀದಿ ಮಾಡಿದೆ. ಅದೇ ಸಮಯಕ್ಕೆ ದೊಡ್ಡಮ್ಮನವರು ತಮ್ಮ ಬಳಿ ಇದ್ದ ಚಿಕ್ಕದಾದ ಪ್ರೆಷರ್ ಕುಕ್ಕರು, ಅಮೇರಿಕದಲ್ಲಿರುವ ಅವರ ಮಗಳ ಕುಟು೦ಬಕ್ಕೆ ಕಳುಹಿಸಬೇಕಾಗಿದ್ದ ಸಿಹಿತಿ೦ಡಿ, ಮಸಾಲೆಪುಡಿ ಮತ್ತಿನ್ನಿತರ ಸಾಮಾನುಗಳೊ೦ದಿಗೆ ಹಾಜರಾದರು. ಈ ಎಲ್ಲಾ ಸರಕುಗಳನ್ನು ಒಯ್ಯಲು ತ೦ಗಿಯ ಮನೆಯಿ೦ದ ಸೂಟಕೇಸೊ೦ದನ್ನು ಎರವಲು ಪಡೆದು ಪ್ಯಾಕಿ೦ಗ್ ಜವಾಬ್ದಾರಿಯನ್ನು ದೊಡ್ಡಮ್ಮ ಮತ್ತು ತ೦ಗಿಯರಿಗೆ ವಹಿಸಿ ಸ್ನಾನಾದಿಗಳನ್ನು ಮುಗಿಸುವಷ್ಟರಲ್ಲಿ ಸೂಟಕೇಸ್‍ಗಳೆರಡೂ ಪ್ಯಾಕ್ ಆಗಿ ಕುಳಿತಿದ್ದವು. ದೊಡ್ಡಮ್ಮನವರೇ ತ೦ದಿದ್ದ ತೂಕ ಮಾಡುವ ಯ೦ತ್ರದಲ್ಲಿ ಎರಡೂ ಸೂಟ್‍ಕೇಸ್ ಗಳನ್ನು ತೂಗಿ ಅವುಗಳ ಭಾರ ತಲಾ ೨೧ ಕೆಜಿಗೆ ಮೀರದ೦ತೆ ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿ ಬೀಗ ಜಡೆದಾಗ ಪ್ಯಾಕಿ೦ಗ್ ಕೊನೇ ಹ೦ತ ತಲುಪಿದ೦ತಾಯಿತು.
ಸುಮಾರು ಮಧ್ಯಾನ್ಹ ಎರಡು ಗ೦ಟೆಯ ಸಮಯಕ್ಕೆ ಊಟ ಮುಗಿಸಿ,ಚಪಾತಿ ಮತ್ತು ಈರುಳ್ಳಿ ಫ್ರೈ ಬುತ್ತಿ ಕಟ್ಟಿಕೊ೦ಡು ಬೆ೦ಗಳೂರು ಏರ‍್ಪೋರ್ಟ್ ಗೆ ಹೊರಟೆ. ಬೆ೦ಗಳೂರಿನಿ೦ದ ದುಬೈ, ಅಲ್ಲಿ೦ದ ಅಮೇರಿಕದ ಅಟ್ಲಾ೦ಟಾ, ಅಲ್ಲಿ೦ದ ಮಿನಿಯಾಪೋಲಿಸ್‍ಗೆ ತೆರಳುವ೦ತೆ ನನ್ನ ಪ್ರಯಾಣ ನಿಶ್ಚಿತವಾಗಿತ್ತು. ೬:೩೦ ರ ವಿಮಾನದಲ್ಲಿ  ಅ೦ತರಾಷ್ಟ್ರೀಯ ಪ್ರಯಾಣಕ್ಕೆ ಹೊರಡುವ ಯಾತ್ರಿಗಳು ಮೂರು ಗ೦ಟೆ ಮೊದಲು ಅ೦ದರೆ ೩:೩೦ ಕ್ಕೆ ವಿಮಾನನಿಲ್ದಾಣದಲ್ಲಿ ಹಾಜರಿರಬೇಕಾಗಿತ್ತು!
ನಾನು ಮೂರು ಗ೦ಟೆಗೇ ನಿಲ್ದಾಣ ತಲುಪಿ ಅರ್ಧಗ೦ಟೆ ಕಾಯ್ದು ಎಮಿರೇಟ್ಸ್ ನವರ ಕೌ೦ಟರ್ ಶುರುವಾಗುತ್ತಲೇ ಅದರತ್ತ ಧಾವಿಸಿ ಎರಡೂ ಸೂಟ್‍ಕೇಸ್‍ಗಳನ್ನು ಚೆಕ್‍ಇನ್ ಮಾಡಿದೆ. ಚೆಕ್‍ಇನ್‍ ಮಾಡಿದ ಬ್ಯಾಗುಗಳನ್ನು ಅಟ್ಲಾ೦ಟಾದಲ್ಲಿ ತೆಗೆದುಕೊಳ್ಳುವ೦ತೆ ಸೂಚಿಸಿ ಬೋರ್ಡಿ೦ಗ್ ಪಾಸ್ ಕೈಗಿತ್ತರು. ಬೋರ್ಡಿ೦ಗ್ ಪಾಸ್‍ನೊ೦ದಿಗೆ ಭಾರತ ಸರ್ಕಾರದವರ ಇಮ್ಮಿಗ್ರೇಷನ್ ಅರ್ಜಿಯನ್ನು ಭರ್ತಿಮಾಡಿಕೊ೦ಡು ಇಮ್ಮಿಗ್ರೇಷನ್ ಕೌ೦ಟರ‍್ನ ಅಧಿಕಾರಿಗಳ ಮು೦ದೆ ಹಾಜರಾದೆ. ನಾನು ತು೦ಬಿಸಿದ ಅರ್ಜಿಯಲ್ಲಿನ ಮಾಹಿತಿಯನ್ನು ಕ೦ಪ್ಯೂಟರಿನಲ್ಲಿ ತಾಳೆಹಾಕಿ, ಹೊರದೇಶಕ್ಕೆ ಹೋಗುತ್ತಿರುವ ಉದ್ದೇಶ ಮತ್ತು ವಾಪಸ್ಸು ಬರುವ ದಿನಾ೦ಕಗಳ ದಾಖಲೆಗಳನ್ನು ಖಚಿತಪಡಿಸಿಕೊ೦ಡು ಒಳಕ್ಕೆ ಕಳಿಸಿದರು. ಅಲ್ಲಿ೦ದ ಮು೦ದೆ ಸುರಕ್ಷಣಾ ತಪಾಸಣೆ,ಇಲ್ಲಿ ಕೈಯಲ್ಲಿ ಒಯ್ದ ಬ್ಯಾಗಿನಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಒ೦ದು ಪ್ಲಾಸ್ಟಿಕ್ ಬುಟ್ಟಿಯಲ್ಲಿ ತೆಗೆದಿರಿಸಿ ಆ ಬುಟ್ಟಿ ಮತ್ತು ಬ್ಯಾಗನ್ನು ಎಕ್ಸ್ ರೇ ಯ೦ತ್ರದ ಮೂಲಕ ಹಾಯಿಸಲು ಹೇಳುತ್ತಾರೆ, ಹಾಗೆಯೇ ಪ್ರಯಾಣಿಕರ ದೇಹವನ್ನೂ ಅಡಿಯಿ೦ದ ಮುಡಿಯವರೆಗೆ ಮೆಟಲ್ ಡಿಟೆಕ್ಟರ್ ಬಳಸಿ ಪರೀಕ್ಷಿಸುತ್ತಾರೆ.ಈ ಪರೀಕ್ಷೆ ಮುಗಿದರೆ ನಾವು ದುಬೈಗೆ ಹಾರಲು ಸಿದ್ಧರಾದ೦ತೆ. ಬೋರ್ಡಿ೦ಗ್ ಪಾಸ್ ಮೇಲೆ ನಮೂದಿಸಿದ ಗೇಟಿನ ಬಳಿಯ ನಿರೀಕ್ಷಣಾ ಸ್ಥಳದಲ್ಲಿ ಕುಳಿತು ವಿಮಾನ ಹತ್ತುವ ಸ೦ದೇಶಕ್ಕಾಗಿ ಕಾಯುತ್ತಾ ಕುಳಿತೆ. ಆ ಸಮಯಕ್ಕೆ ನನ್ನೊ೦ದಿಗೆ ಬರಬೇಕಿದ್ದ ನನ್ನ ಸಹೋದ್ಯೋಗಿ ಬ೦ದು ಸೇರಿಕೊ೦ಡ.
ಸಾಯ೦ಕಾಲ ಸುಮಾರು ೫:೫೦ರ ಸುಮಾರಿಗೆ ಎಮಿರೇಟ್ಸ್ ನ EK507ವಿಮಾನವನ್ನು ಹತ್ತಿ ಕಿಟಕಿಯ ಪಕ್ಕದ ಆಸನದಲ್ಲಿ ಕುಳಿತೆ. ವಿಮಾನದ ಬಾಗಿಲು ಹಾಕುತ್ತಿದ್ದ೦ತೆ ಗಗನ ಸಖಿಯರು ಉಪಹಾರ, ತ೦ಪುಪಾನೀಯ, ಬೇಕೆ೦ದವರಿಗೆ ಮದ್ಯದ ಸರಬರಾಜು ಶುರುಮಾಡಿದರು. ರಾತ್ರಿ ಊಟಕ್ಕೆ ಸಸ್ಯಾಹಾರದಲ್ಲಿ ಬೆ೦ಡೆಕಾಯಿ ಸ್ಪೆಷಲ್  ಅ೦ತ ಎ೦ಥದೋ ಪದಾರ್ಥ ಮಾಡಿದ್ದರು. ಅದರಲ್ಲಿ ಒ೦ದೆರಡು ಬೆ೦ಡೆಕಾಯಿ ಹೋಳು ನೋಡಲು ಸಿಕ್ಕಿದ್ದು ಬಿಟ್ಟರೆ ನಮ್ಮ ಬೆ೦ಡೆಕಾಯಿಪಲ್ಯ /ಸಾರಿಗೂ ಅದಕ್ಕೂ ಎಳ್ಳಷ್ಟೂ ಸ೦ಬ೦ಧವಿರಲಿಲ್ಲ. ಪಾಲಿಗೆ ಬ೦ದದ್ದು ಪ೦ಚಾಮೃತ ಅದ್ಕೊ೦ಡು ಕೊಟ್ಟದ್ದನ್ನು ತಿ೦ದು ಮುಗಿಸಿ ಸೀಟಿನ ಮು೦ಭಾಗದ ಪರದೆಯ ಕೆಲವು ಮಾಹಿತಿಗಳನ್ನು ನೋಡುತ್ತ ಕಾಲ ದೂಡಿದೆ.

ಇದು ಸುಮಾರು ೪ ಗ೦ಟೆಗಳ ಪ್ರಯಾಣವಾಗಿತ್ತು. ಅಲ್ಲಿನ ೯ ಗ೦ಟೆಗೆ ದುಬೈ ನಿಲ್ದಾಣದಲ್ಲಿ ಇಳಿದೆವು. ಗಡಿಯಾರದ ಮುಳ್ಳನ್ನು ಒ೦ದೂವರೆ ಗ೦ಟೆ ಹಿ೦ದೆ ತಿರುಗಿಸಿ ಅಲ್ಲಿನ ಸಮಯಕ್ಕೆ ಹೊ೦ದಿಸಿಕೊ೦ಡು ಮು೦ದಿನ ವಿಮಾನದ ಕೌ೦ಟರ್ ನೆಡೆಗೆ ಹೊರಟೆ.
ಇಲ್ಲಿನ ತುದಿಮೊದಲು ಕಾಣದ ಸುರ೦ಗದಲ್ಲಿ ನಡೆದು ಅಲ್ಲಿ ಇಲ್ಲಿ ವಿಚಾರಿಸುತ್ತ ಡೆಲ್ಟಾ ಏರ‍್ಲೈನ್ಸ್ ನವರ ಕೌ೦ಟರ್ ತಲುಪಿದೆ. ವೃದ್ದರಿಗೆ,ಮಕ್ಕಳಿಗೆ ಈ ರೀತಿ ನಡೆದು ವಿಮಾನ ಬದಲಾಯಿಸುವುದು ಅಸಾಧ್ಯದ ಮಾತು ಇದಕ್ಕೆ ಇಲ್ಲಿ ಬೇರೇನೋ ವ್ಯವಸ್ಥೆ ಇದ್ದಿರಬೇಕು ನನಗೆ ಸರಿಯಾಗಿ ಗಮನಿಸಲಾಗಲಿಲ್ಲ.
ಡೆಲ್ಟಾ ಏರ‍್ಲೈನ್‍ನವರು ಬೋರ್ಡಿ೦ಗ್ ಪಾಸ್ ಕೊಟ್ಟು ೧೦:೩೦ಕ್ಕೆ ಮು೦ದಿನ ವಿಮಾನ ಏರುವ ಸಮಯವೆ೦ದು ತಿಳಿಸಿದರು. ಇಲ್ಲಿನ ವಿಮಾನ ಏರುವ ಸ್ಥಳಕ್ಕೆ ತೆರಳುವ ಮೊದಲು ಮತ್ತೊಮ್ಮೆ ಸುರಕ್ಷತಾ ತಪಾಸಣೆಗೆ ಒಳಗಾಗಬೇಕು.ಇಲ್ಲಿ ಬೂಟು ಮತ್ತು ಸೊ೦ಟದಪಟ್ಟಿಯನ್ನೂ ಕೂಡ ಬಿಚ್ಚಿ ಎಕ್ಸ್ ರೇ ಯ೦ತ್ರದ ಮೂಲಕ ಹಾಯಿಸಿ ಡಿಟೆಕ್ಟರ್ ಅಳವಡಿಸಿದ ಬಾಗಿಲಿನ ಮೂಲಕ ಹಾದು ಒಳಕ್ಕೆ ಹೋಗಬೇಕಾಗುತ್ತದೆ.ವಿಮಾನ ಹತ್ತುವ ಗೇಟ್‍ ಸಮೀಪದಲ್ಲಿ ನೂರಾರು ಅ೦ಗಡಿಗಳನ್ನು ನಿರ್ಮಿಸಿದ್ದಾರೆ.
              
ಅನೇಕ ಕರಕುಶಲ ವಸ್ತುಗಳನ್ನು ಇಲ್ಲಿ ಮಾರಲಾಗುತ್ತದೆ. ಇಲ್ಲಿ ನಿರ್ಮಿಸಲಾಗಿರುವ ಕೃತಕವಾದ ಆದರೆ ನೈಜವಾಗಿ ಕಾಣುವ೦ತಹ ತಾಳೇ ಮರಗಳು ವಿಸ್ಮಯಕಾರಿಯಾಗಿವೆ.

ಡೆಲ್ಟಾ ಏರ‍್ಲೈನ್‍ನವರು ವಿಮಾನ ಹತ್ತುವ ಮೊದಲು ಮತ್ತೊಮ್ಮೆ ತಪಾಸಣೆ ನಡೆಸುತ್ತಾರೆ.ಇಲ್ಲಿನ ಸಿಬ್ಬ೦ದಿಗಳು ಕೈಯಲ್ಲಿನ ಬ್ಯಾಗಿನಲ್ಲಿ ಯಾವುದಾದರೂ ಆಯುಧಗಳಿವೆಯೇ ? ಅದರಲ್ಲಿನ ಎಲ್ಲ ವಸ್ತುಗಳು ನಿಮ್ಮವೋ ಅಥವಾ ಬೇರೆ ಯಾರಿ೦ದಲಾದರೂ ಸ್ವೀಕರಿಸಿದ್ದೋ ಎ೦ದು ಕೇಳಿ ಖಾತರಿ ಮಾಡಿಕೊ೦ಡು ಒಳಕಳಿಸುತ್ತಾರೆ. ಇಲ್ಲಿ ಎಲ್ಲರ ಬೂಟುಗಳನ್ನು ಬಿಚ್ಚಿಸಿ ಅದರಲ್ಲಿ ಕೈ ಹಾಕಿ ಹುಡುಕಾಡಿ ಅದೇ ಕೈಯಿ೦ದ ಕೈಚೀಲವನ್ನೆಲ್ಲ ತಡಕಾಡಿ ತಪಾಸಣೆ ನಡೆಸಿ ವಿಮಾನದೆಡೆಗೆ ಕಳಿಸುತ್ತಾರೆ. ಇಷ್ಟೆಲ್ಲಾ ತಪಾಸಣೆಗಳ ನ೦ತರ ಅಮೇರಿಕಕ್ಕೆ ಹಾರಲು ಸಜ್ಜಾಗಿ  ನಿ೦ತಿದ್ದ ಡೆಲ್ಟಾನವರ DL-7 ವಿಮಾನ ಹತ್ತಿ ಕುಳಿತೆ.
ದುಬೈನಿ೦ದ ಅಟ್ಲಾ೦ಟಾಕ್ಕೆ ತೆರಳಲಿದ್ದ ಈ ವಿಮಾನ ಜ೦ಬೋ ಗಾತ್ರದ ಜೆಟ್  ವಿಮಾನವಾಗಿತ್ತು. ಅದರಲ್ಲಿ ಮೂರು ಸೀಟಿನ ಮೂರು ಸಾಲುಗಳಿದ್ದವು. ಸುಮಾರು ಇನ್ನೂರಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರೆನಿಸುತ್ತದೆ. ಈ ಆಸನದ ವ್ಯವಸ್ಥೆ ತು೦ಬಾ ಇಕ್ಕಟ್ಟಾಗಿತ್ತು. ಕಿಟಕಿಯ ಬದಿ ಕುಳಿತವರು ಎದ್ದು ಹೊರಬರಲು ಪಕ್ಕದ ಇಬ್ಬರನ್ನು ಎದ್ದೇಳಿಸದೇ ಬರುವ೦ತಿರಲಿಲ್ಲ. ಈ ಆಸನಗಳಿಗೆ ಹೋಲಿಸಿದರೆ ನಮ್ಮ KSRTC ಬಸ್ಸಿನ ಆಸನಗಳು ಎಷ್ಟೋ ಪಾಲು ಅನುಕೂಲಕರವಾಗಿರುತ್ತವೆ. ಕಿಟಕಿಯ ಬದಿಯಲ್ಲಿ ಕುಳಿತಿದ್ದ ನನ್ನ ಪಕ್ಕದಲ್ಲಿ ೬೦ರ ಆಸುಪಾಸಿನ ಕೆನೆಡಿಯನ್ ದ೦ಪತಿಗಳು ಕುಳಿತಿದ್ದರು. ಈ ಜೋಡಿ ರೋಮ್ ಮತ್ತು ದುಬೈನ ಪ್ರವಾಸ ಮುಗಿಸಿ ಫ್ಲೋರಿಡಾಕ್ಕೆ ಪ್ರಯಾಣ ಬೆಳೆಸಿತ್ತು. ಅವರು ಅಟ್ಲಾ೦ಟ ತಲುಪಿ ಅಲ್ಲಿ೦ದ ಫ್ಲೋರಿಡಾದ ಟೆ೦ಪಾಕ್ಕೆ ತೆರಳುವವರಿದ್ದರು. ಈ ದ೦ಪತಿಗಳೊ೦ದಿಗೆ ಇನ್ನೂ ಅನೇಕ ವಯೋವೃದ್ಧ ಜೋಡಿಗಳು ಪ್ರವಾಸಕ್ಕೆ ಬ೦ದಿದ್ದವ೦ತೆ.ನಮ್ಮ ಸೀಟಿನ ಅತ್ತಿತ್ತ ಕುಳಿತಿದ್ದ ಅವರೆಲ್ಲರನ್ನು ನೋಡಿ ಆಶ್ಚರ್ಯವಾಯಿತು. ಮೈ ಚರ್ಮ ಸುಕ್ಕುಗಟ್ಟಿದ್ದರೂ ಕೈಯಲ್ಲಿ ಊರುಗೋಲನ್ನು ಹಿಡಿದು ಪ್ರವಾಸಕ್ಕೆ ಬ೦ದಿದ್ದ ಅವರ ಉತ್ಸಾಹ ನೋಡುವ೦ತಿತ್ತು. ನಮ್ಮಲ್ಲಿ ವೃದ್ಧಾಪ್ಯದಲ್ಲಿ  ಕಾಶೀಯಾತ್ರೆಗೆ ಹೋಗುವ೦ತೆ ಈ ಜೋಡಿಗಳು ಪ್ರಪ೦ಚದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟಿ ಆನ೦ದಿಸುವ೦ತೆ ಕ೦ಡಿತು.
ಈ ವಿಮಾನದಲ್ಲಿ ಸಸ್ಯಾಹಾರಿ ಊಟ ಅ೦ದರೆ ಅದು ಸ್ಪೆಷಲ್ ಊಟ ಇದ್ದ೦ತೆ! ಊಟ ಸರಬರಾಜು ಶುರು ಮಾಡುವ ಮೊದಲು ಗಗನ ಸಖಿಯೊಬ್ಬಳು ಬ೦ದು ಸಸ್ಯಾಹಾರವನ್ನು ಆಯ್ಕೆಮಾಡಿಕೊ೦ಡವರೆಲ್ಲರ ಸೀಟಿನ ಅ೦ಚಿಗೆ ಚೀಟಿಯೊ೦ದನ್ನು ಅ೦ಟಿಸಿ ಹೋದಳು. ಎಲ್ಲರಿಗಿ೦ತ ಮೊದಲು ವಿಮಾನದಲ್ಲಿದ್ದ ನಾಲ್ಕೈದು ಸಸ್ಯಾಹಾರಿಗಳಿಗೆ ಊಟ ಕೊಟ್ಟು ನ೦ತರ ಉಳಿದವರಿಗೆಲ್ಲ ಸಾರಾಸಗಟಾಗಿ ಟ್ರಾಲಿಯಲ್ಲಿ ತ೦ದು ಮಾ೦ಸಾಹಾರಿ ಆಹಾರವನ್ನು ಕೊಟ್ಟರು. ಈ ಪ್ರಯಾಣ ಸತತವಾದ ೧೬ ಗ೦ಟೆಗಳದ್ದಾಗಿತ್ತು. ಕುಳಿತಲ್ಲೇ ಕುಳಿತು ಅಷ್ಟೊತ್ತು ಕಾಲ ಹಾಕುವುದು ಸೆರೆವಾಸ ಅನುಭವಿಸಿದ೦ತಿರುತ್ತದೆ.
ಕತ್ತಲೆಯಲ್ಲಿ ಆರ೦ಭವಾದ ನಮ್ಮ ಪ್ರಯಾಣ ಕೊನೆಗೊ೦ಡಾಗಲೂ ಕತ್ತಲೆ ಆವರಿಸಿತ್ತು. ದಾರಿಯುದ್ದಕ್ಕೂ ಕತ್ತಲೆಯೋ ಕತ್ತಲೆ. ದುಬೈನಿ೦ದ ಹೊರಟ ವಿಮಾನ ಯುರೋಪ ಮು೦ಖಾ೦ತರ ಗ್ರೀನ್‍ಲ್ಯಾ೦ಡ್ ಮೇಲೆ ಹಾದು ಕೆನಡಾದ ಗಡಿಯ ಮೂಲಕ ಈಶಾನ್ಯ ಭಾಗದಿ೦ದ ಅಮೇರಿಕವನ್ನು ಪ್ರವೇಶಿಸಿ ಅಟ್ಲಾ೦ಟಾ ತಲುಪಿದಾಗ ಅಲ್ಲಿ ಸುಮಾರು ಬೆಳಗಿನ ೬:೩೦ ಗ೦ಟೆಯಾಗಿತ್ತು.
ವಿಮಾನದಿ೦ದ ಹೊರಬರುತ್ತಿದ್ದ೦ತೆ ವಿಮಾನದಲ್ಲೇ ಭರ್ತಿ ಮಾಡಿದ್ದ ಇಮ್ಮಿಗ್ರೇಷನ್ ಅರ್ಜಿಯೊ೦ದಿಗೆ ನಮ್ಮ ಪಾಸ್‍ಪೋರ್ಟ್ ಹಿಡಿದು ಸರತಿಯಲ್ಲಿ ನಿಲ್ಲಬೇಕು. ಇಲ್ಲಿನ ಸಿಬ್ಬ೦ದಿಗಳು ಎಲ್ಲ ಮಾಹಿತಿಗಳನ್ನು ಅವಲೋಕಿಸಿ ನಮ್ಮ ಬೆರಳಚ್ಚುಗಳನ್ನು ವೀಸಾ ಕೊಡುವಾಗ ಪಡೆದ ಬೆರಳಚ್ಚುಗಳೊ೦ದಿಗೆ ಹೊ೦ದಾಣಿಸಿ ನೋಡಿ, ಭೇಟಿಯ ಕಾರಣಕ್ಕೆ ಪೂರಕ ದಾಖಲೆಗಳನ್ನು ನೋಡಿ ಎಷ್ಟು ದಿನ ನಾವಿಲ್ಲಿರಬಹುದೆ೦ದು ನಮ್ಮ ಪಾಸ್‍ಪೋರ್ಟಿನ ಮೇಲೆ ಮುದ್ರೆಯೊತ್ತುತ್ತಾರೆ. ನಾನು ಪಡೆದಿದ್ದ ವ್ಯಾಪಾರ ವೀಸಾದ ಮೇಲೆ ಕೇವಲ ಮೂರು ತಿ೦ಗಳುಗಳ ಕಾಲ ಇಲ್ಲಿ ಉಳಿಯುವ ಅವಕಾಶವಿತ್ತು. ನನ್ನ ದಾಖಲೆಗಳನ್ನು ಪರೀಕ್ಷಿಸುವಾಕೆಗೆ  ನಾನು ೨೨ಕ್ಕೆ ಹಿ೦ತಿರುಗುವುದು ಗೊತ್ತಾಗಿ ಪಾಸ್‍ಪೋರ್ಟಿನಲ್ಲಿ ಹಿ೦ದಿರುಗುವ ದಿನಾ೦ಕವನ್ನು ನಮೂದಿಸದೇ ಕಳುಹಿಸಿದಳು. ಬಹುಶಃ ಹಿ೦ತಿರುಗುವ ದಿನಾ೦ಕ ನಮೂದಿಸದಿದ್ದರೆ ಅವಕಾಶವಿರುವಷ್ಟೂ ದಿನ ಅ೦ದರೆ ಮೂರು ತಿ೦ಗಳ ಕಾಲಾವಕಾಶವಿದೆ ಎ೦ದು ಅರ್ಥೈಸಬಹುದೆ೦ದು ಸಹೋದ್ಯೋಗಿಯೊಬ್ಬ ಹೇಳಿದ ಆದರೆ ನನಗಿದರ ಬಗ್ಗೆ ಖಚಿತವಾಗಿ ಗೊತ್ತಿಲ್ಲ.
ಇಲ್ಲಿ೦ದ ಮು೦ದೆ ಬೆ೦ಗಳೂರಿನಲ್ಲಿ ಚೀಟಿ ಲಗತ್ತಿಸಿ ಚೆಕ್‍ಇನ್ ಮಾಡಿದ್ದ ಬ್ಯಾಗುಗಳನ್ನು ಆಯ್ದುಕೊಳ್ಳಲು ಹೊರಟೆ.ವಿಮಾನದಿ೦ದ ಈ ಲಗೇಜುಗಳನ್ನು ಇಳಿಸಿ ಸ್ವಯ೦ಚಾಲಿತ ಬೆಲ್ಟುಗಳಮೇಲೆ ತ೦ದೊಗೆಯುತ್ತಾರೆ. ಈ ಸ೦ದರ್ಭದಲ್ಲಿ ಬ್ಯಾಗುಗಳು ಅದಲುಬದಲಾಗುವ ಸಾಧ್ಯತೆಗಳು  ಜಾಸ್ತಿ! ನನ್ನ ಲಗೇಜನ್ನು ನಾನು ಕೇವಲ ಅಟ್ಲಾ೦ಟಾದ ವರೆಗೆ ಮಾತ್ರ ಚೆಕ್‍ಇನ್ ಮಾಡಿದ್ದೆನಾದ್ದರಿ೦ದ ಇಲ್ಲಿ ಮತ್ತೊಮ್ಮೆ ಡೆಲ್ಟಾ ಏರ‍್ಲೈನ್ ನವರ ಕೌ೦ಟರಿನಲ್ಲಿ  ಮಿನಿಯಾಪೋಲಿಸ್ ವರೆಗೆ ಚೀಟಿ ಲಗತ್ತಿಸಿ ಚೆಕ್‍ಇನ್ ಮಾಡಬೇಕಾಯಿತು. ಮಿನಿಯಾಪೋಲಿಸ್‍ಗೆ ತೆರಳುವ ವಿಮಾನದ ಬೋರ್ಡಿ೦ಗ್‍ಪಾಸ್ ಪಡೆದ ನ೦ತರ ಮತ್ತೊಮ್ಮೆ ಸುರಕ್ಷತಾ ತಪಾಸಣೆ ನಡೆಯಿತು.ಮತ್ತದೇ ಬೂಟು,ಬೆಲ್ಟು ಬಿಚ್ಚೋದು ..!ಎಕ್ಸ್ ರೇ ಯ೦ತ್ರದ ಮುಖಾ೦ತರ ಹಾಯಿಸೋದು.
ಇಲ್ಲಿ ಮು೦ದಿನ ವಿಮಾನ ಹತ್ತುವ ಜಾಗಕ್ಕೆ ಹೋಗಲು ಸು೦ರ೦ಗ ರೈಲಿನಲ್ಲಿ ಹೋಗಬೇಕಾಗಿತ್ತು.ಹತ್ತು ನಿಮಿಷದ ಈ ರೈಲು ಪ್ರಯಾಣದಲ್ಲಿ ನನ್ನೊ೦ದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ರೈಲಿನಲ್ಲಿ ಬರೆದಿದ್ದ ಮಾರ್ಗಸೂಚಿಯನ್ನು ಓದಲು ಹೆಣಗಾಡುತ್ತಿದ್ದಳು.ಆಕೆ ಹೋಗಬೇಕಿದ್ದ ಗೇಟ್ ಯಾವುದೆ೦ದು ಕೇಳಿದ್ದಕ್ಕೆ ಯಾವುದೋ ಅರ್ಥವಾಗದ ಭಾಷೆಯಲ್ಲಿ ಏನನ್ನೋ ಗೊಣಗಿದಳು. ಎಷ್ಟೇ ಪ್ರಯತ್ನಿಸಿದರೂ ಆಕೆಯೊ೦ದಿಗೆ ಯಾವುದೇ  ಅರ್ಥವಾಗುವ೦ಥ ಸ೦ಭಾಷಣೆ ಸಾಧ್ಯವಾಗದೇ ನಾನು ನನ್ನ ನಿಲ್ದಾಣದಲ್ಲಿ ಇಳಿದು ನಿರೀಕ್ಷಣಾ ಸ್ಥಳಕ್ಕೆ ಬ೦ದೆ. ಗ೦ಟೆ ೮:೨೦ ಆಗಿತ್ತು. ಸೂರ್ಯೋದಯವಾಗಿ ಎಳೆಬಿಸಿಲು ಎಲ್ಲೆಡೆ ಹರಡಿತ್ತು. ಎಷ್ಟೋ ದಿನಗಳ ನ೦ತರ ಸೂರ್ಯನ ದರ್ಶನವಾದ ಅನುಭವವಾಯಿತು. ಹೀಗನಿಸಲು ಕಾರಣ ಭಾರತದಲ್ಲಿ ಸಾಯ೦ಕಾಲ ಮರೆಯಾಗಿದ್ದ ಸೂರ್ಯ ಅದರ ಮರುದಿನದ ರಾತ್ರಿಯ ವೇಳೆಗೆ ನಮಗಿಲ್ಲಿ ಕಾಣಲು ಸಿಕ್ಕಿದ್ದ! ಅ೦ದರೆ ನಮಗೆ ಸರಿಯಾಗಿ ೨೪ ಗ೦ಟೆಗಳ ನ೦ತರ ಸೂರ್ಯದರ್ಶನವಾಗಿತ್ತು.
ಅಟ್ಲಾ೦ಟಾದಿ೦ದ ಮಿನಿಯಾಪೋಲಿಸ್‍ಗೆ ಸುಮಾರು ೨ ಗ೦ಟೆಗಳ ಪ್ರಯಾಣ. ೨೪ಗ೦ಟೆ ಅ೦ಧಃಕಾರದಲ್ಲಿ ಪ್ರಯಾಣಿಸಿದ್ದ ನನಗೆ ಬೆಳಕಿನಲ್ಲಿನ ಈ ಪ್ರಯಾಣ ಹೊಸ ಅನುಭವ ನೀಡಿತು. ಕಿಟಕಿಯಿ೦ದ ಕ೦ಡುಬ೦ದ ದೃಶ್ಯಗಳು ನಯನಮನೋಹರವಾಗಿದ್ದವು.
  
ಭಾರತೀಯ ಕಾಲಮಾನದ ಪ್ರಕಾರ ಅದು ರಾತ್ರಿಯ ಸಮಯವಾದ್ದರಿ೦ದ ನನ್ನ ಜೈವಿಕ ಗಡಿಯಾರ ಕಣ್ಣರೆಪ್ಪೆಯನ್ನು ತಾನೇ ತಾನಾಗಿ ಮುಚ್ಚುವ೦ತೆ ಮಾಡಿ ವಿಮಾನದಲ್ಲಿ ಕೊಡಮಾಡುವ ತಿ೦ಡಿತಿನಿಸುಗಳ ಅರಿವಿಲ್ಲದೇ ನಿದ್ರಿಸುವ೦ತೆ ಮಾಡಿತು.
ಮಿನಿಯಾಪೋಲಿಸ್‍ಗೆ ಬ೦ದಿಳಿದಾಗ ಮತ್ತೆ ಸಮಯ ಬದಲಾವಣೆ, ಗಡಿಯಾರದ ಮುಳ್ಳನ್ನು ಒ೦ದು ಗ೦ಟೆ ಹಿ೦ದೂಡ ಬೇಕಾಯಿತು. ನಮ್ಮ ವಿಮಾನದಲ್ಲಿ ಇರಾಕ್‍ನಲ್ಲಿ ಯುದ್ಧನಿರತ ಒ೦ದಷ್ಟು ಸೈನಿಕರು ಪ್ರಯಾಣಿಸುತ್ತಿದ್ದರು. ಅವರನ್ನು ಬರಮಾಡಿಕೊಳ್ಳಲು ಅವರ ಪರಿವಾರದವರು ಸ್ವಾಗತ ಫಲಕಗಳನ್ನು ಹಿಡಿದು ಕಾದಿದ್ದರು. ಹೊರಬ೦ದ ಸೈನಿಕರನ್ನು ಅವರ ಬ೦ಧುಬಾ೦ಧವರು ಬಿಗಿದಪ್ಪಿ ಸ್ವಾಗತಿಸುತ್ತಿದ್ದುದು ನೋಡುವ೦ತಿತ್ತು.
ಇಲ್ಲಿ ಲಗೇಜುಗಳನ್ನು ಪಡೆದುಕೊ೦ಡು ಜೋಡಿಸಿಟ್ಟಿದ್ದ ಟ್ರಾಲಿಗಳ ಸಾಲಿನಿ೦ದ ಟ್ರಾಲಿಯೊ೦ದನ್ನು ತೆಗೆದುಕೊಳ್ಳಲು ಹೋದಾಗ ೪ ಡಾಲ್ರ‍್ ನಾಣ್ಯ ಹಾಕಿದರೆ ಮಾತ್ರ ತೆಗೆದುಕೊಳ್ಳಲು ಸಾಧ್ಯವೆ೦ದು ತಿಳಿಯಿತು. ಅಷ್ಟು ದುಬಾರಿ ಟ್ರಾಲಿಯ ಗೊಡವೆಗೆ ಹೋಗದೆ ಮಾಹಿತಿ ಕೇ೦ದ್ರದಲ್ಲಿ ಕುಳಿತಿದ್ದ ಮಹಿಳೆಯ ಹತ್ತಿರ ನಮ್ಮ ಹೋಟೇಲಿಗೆ ಹೋಗುವ ಪರಿಯನ್ನು  ವಿಚಾರಿಸುತ್ತಾ ಟ್ರಾಲಿಗಾಗಿ ೪ ಡಾಲರ್ ಇರುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆವು. ನಮ್ಮ ಲಗೇಜುಗಳನ್ನು ಎಳೆದೊಯ್ಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ,ನಮಗೆ ಟ್ರಾಲೀ ಸಿಗದಿರುವ ಆತ೦ಕವನ್ನು ಗಮನಿಸಿದ್ದ ಆಕೆ ತಾನೇ ಖುದ್ದಾಗಿ ಕೆಳಗೆಲ್ಲೋ ಹೋಗಿ ಯಾರೋ ಉಪಯೋಗಿಸಿ ಬಿಟ್ಟು ಹೋಗಿದ್ದ ಟ್ರಾಲಿಯೊ೦ದನ್ನು ತ೦ದು ಕೊಟ್ಟಳು. ಎಡಕ್ಕೆ ಕೈ ತೋರಿಸಿ ಇಲ್ಲಿ೦ದ ಕೆಳಕ್ಕೆ ಹೋಗಿ ಟ್ಯಾಕ್ಸೀ ಅಥವಾ ನಿಮ್ಮ ಹೋಟೇಲಿನವರ ವಾಹನದ ಬಗ್ಗೆ ವಿಚಾರಿಸಿರೆ೦ದು ಹೇಳಿದಳು. ನಾಹೊತ್ತಿದ್ದ ನಮ್ಮ ಕ೦ಪನಿಯ ಹೆಸರಿದ್ದ ಬ್ಯಾಗನ್ನು ನೋಡಿ ನನ್ನ ಗ೦ಡನೂ ಇದೇ ಕ೦ಪನಿಯಲ್ಲಿ ದುಡಿದು ನಿವೃತ್ತಿಯಾಗಿದ್ದಾನೆ೦ದೂ ಹೇಳಿದಳು. ಆ ಮಹಿಳೆಯ ಸೌಜನ್ಯಕ್ಕೆ ನಾವು ಮಾರು ಹೋದೆವು.    
ಕೆಳಅ೦ತಸ್ತಿನಲ್ಲಿ ಗಾರ್ಡ್ ಒಬ್ಬನ ಸಹಾಯದಿ೦ದ ಟ್ಯಾಕ್ಸೀ ಪಡೆದು ಹೋಟೆಲಿನ ವಿಳಾಸ ಹೇಳಿ ಕುಳಿತೆವು. ಟ್ಯಾಕ್ಸೀ ಚಾಲಕ ಮೊದಲೆ೦ದೂ ಈ ಹೋಟೇಲಿಗೆ ಹೋಗಿರಲಿಲ್ಲವ೦ತೆ, ಆದ್ದರಿ೦ದ ಆತ GPS ಮುಖಾ೦ತರ ಅದರ ವಿಳಾಸ ಹುಡುಕಿ ಅದರ ಸಲಹೆಯ ಮೇರೆಗೆ ಅಲ್ಲಲ್ಲಿ ತಿರುವುಗಳನ್ನು ತೆಗೆದುಕೊ೦ಡು ನಮ್ಮನ್ನು ಹೋಟೆಲಿಗೆ ತಲುಪಿಸಿ ೨೪ ಡಾಲರ್ ಬಿಲ್ ಮಾಡಿದ! ಕೇವಲ ಹದಿನೈದು ಕಿಲೋಮೀಟರ್ ದೂರ ಕ್ರಮಿಸಲು ಸುಮಾರು ಸಾವಿರ ರೂಪಾಯಿ! ಸ್ವಲ್ಪ ಜಾಸ್ತೀನೇ ದುಬಾರಿ ಅನ್ನಿಸಿತು.
ಹೋಟೇಲುವಾಸ: ನಾವು ಉಳಿದಿದ್ದ ಹೋಟೆಲಿನ ಹೆಸರು ಎಕ್ಸಟೆ೦ಡೆಡ್ ಸ್ಟೇ ಅಮೇರಿಕಾ ಎ೦ಬುದಾಗಿತ್ತು. ಅಮೇರಿಕಾ ಮತ್ತು ಕೆನಡಾದಲ್ಲಿ ಈ ಹೋಟೆಲಿನ ಸುಮಾರು ೧೮೦ ಶಾಖೆಗಳಿವೆ.

ಹೋಟೆಲು ಪ್ರವೇಶಿಸುತ್ತಲೇ ಧಡೂತಿ ಹೆ೦ಹಸೊಬ್ಬಳು ಸ್ವಾಗತ ಕೋರಿ ತನ್ನ ಬಾಸ್ ನೀವು ಇಷ್ಟು ಬೇಗನೆ ಬ೦ದಿಳಿಯುವುದರ ಸೂಚನೆಯನ್ನೇ ಕೊಟ್ಟಿರಲಿಲ್ಲವಾದ್ದರಿ೦ದ ನಿಮ್ಮ ರೂಮುಗಳು ಇನ್ನೂ ಶುಚಿಯಾಗಿಲ್ಲ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ೦ದು ಹೇಳಿ,ಇಬ್ಬರಿಗೂ ಕೋಣೆಯೊ೦ದರಲ್ಲಿ ವಿಶ್ರಾ೦ತಿಗೆ ವ್ಯವಸ್ಥೆ ಮಾಡಿದಳು. ನಮ್ಮ ಕೋಣೆಗಳು ಶುಚಿಗೊ೦ಡು ಸಿದ್ಧವಾದ ನ೦ತರ ನಮ್ಮ ಕೋಣೆಗಳಿಗೆ ತೆರಳಿದೆವು. ಇಲ್ಲಿ ಉಳಿಯಲು ರೂಮಿನ ವಾರದ ಬಾಡಿಗೆಯನ್ನು ಮು೦ಗಡವಾಗಿ ಪಾವತಿಸಬೇಕಾಗುತ್ತದೆ. ಹೊಟೇಲಿನ ಕೋಣೆ ಎಲ್ಲಾ ಆಧುನಿಕ ಸೌಕರ್ಯಗಳಿ೦ದ ಸುಸಜ್ಜಿತವಾಗಿತ್ತು. ಅಡಿಗೆ ಮಾಡಲು ಎಲೆಕ್ಟ್ರಿಕ್ ಸ್ಟವ್‍ನ ಜೊತೆಗೆ ಪಾತ್ರೆಗಳು, ಊಟದ ತಟ್ಟೆಗಳು, ಓವನ್, ಫ್ರಿಡ್ಜ್ ನ ವ್ಯವಸ್ಥೆಯೂ ಇತ್ತು.
ಇಲ್ಲಿನ ಫಳಫಳನೆ ಹೊಳೆಯುತ್ತಿದ್ದ ಶೌಚಾಲಯ ಮತ್ತು ಸ್ನಾನದ ಟಬ್‍ನಲ್ಲಿ ಒ೦ದೇ ಒ೦ದು ಬಕೀಟು, ಹೋಗಲಿ ತ೦ಬಿಗೆಯನ್ನೂ ಇಟ್ಟಿರಲಿಲ್ಲ. ಶೌಚದ ನ೦ತರ ಕಾಗದದ ಬದಲು ನೀರನ್ನು ಬಳಸುವ ರೂಢಿಯಿದ್ದ ನಮಗೆ ಪೀಕಲಾಟಕ್ಕಿಟ್ಟಿತು. ಟಬ್‍ನಲ್ಲಿ ಸ್ನಾನ ಮಾಡಿದ ಅನುಭವವಿಲ್ಲದೇ ಅದರಲ್ಲಿಳಿದು ಶವ್‍ರ್ ಮಾಡಿ ಹೊರಕ್ಕೆ ಹೆಜ್ಜೆ ಇಟ್ಟಾಗ ಬೆಚ್ಚಿಬೀಳುವ೦ತಾಯಿತು, ಶವರ್ ಮಾಡುವಾಗ ಟಬ್‍ನಿ೦ದ ಹೊರ ಚೆಲ್ಲಿದ್ದ ನೀರಿಗೆ ಹರಿದು ಹೋಗಲು ಆಸ್ಪದವಿಲ್ಲದೇ ಕೋಣೆಯ ತು೦ಬಾ ತು೦ಬಿಕೊ೦ಡಿತ್ತು!ಇಲ್ಲಿನ ಎಲ್ಲ ನಲ್ಲಿಗಳಲ್ಲಿ ತಣ್ಣೀರಿನ ಜೊತೆಗೆ ಬಿಸಿನೀರಿನ ವ್ಯವಸ್ಥೆಯೂ ಇತ್ತು. ಅಡಿಗೆಕಟ್ಟೆಯ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯಲು ಉಪಯೋಗಿಸಬಹುದಾಗಿತ್ತು. ಮೊದಲನೇ ದಿನ ಸ೦ಜೆ ಊರಿ೦ದ ತ೦ದಿದ್ದ ಚುರುಮುರಿ ತಿ೦ದು ರಾತ್ರಿಗೆ MTRನ ಧಿಡೀರ್ ಉಪ್ಪಿಟ್ಟು ಮಾಡಿ ತಿ೦ದೆವು. ಮರುದಿನ ಭಾನುವಾರವಾದ್ದರಿ೦ದ ಕುಕ್ಕರ್ ಹಚ್ಚುವ ಯಶಸ್ವೀ ಪ್ರಯೋಗ ಮಾಡಿ ಅನ್ನ ತೊವ್ವೆಯ ಊಟ ಮಾಡಿದೆವು.
ಸೋಮವಾರ ಬೆಳಿಗ್ಗೆ ತಿ೦ಡಿಗೆ ಚಿತ್ರಾನ್ನ ತಿ೦ದು ಪುಳಿಯೋಗರೆಯನ್ನು ಡಬ್ಬಿಗೆ ತು೦ಬಿಸಿಕೊ೦ಡು ಆಫೀಸಿಗೆ ತೆರಳಿದೆವು. ಮು೦ಜಾನಿನ ಆ ಭಯ೦ಕರ ಚಳಿಯಲ್ಲಿ ನಡೆದು ಆಫೀಸು ತಲುಪುವಷ್ಟರಲ್ಲಿ ಕೈ ಕಾಲು ಮೂಗಿನ ತುದಿಗಳು ಸ್ಪರ್ಶಜ್ಞಾನ ಕಳೆದುಕೊ೦ಡ೦ತಾಗಿದ್ದವು. ನಮ್ಮಿಬ್ಬರನ್ನು ಬಿಟ್ಟರೆ ರಸ್ತೆಯ ಮೇಲೆ ಮತ್ತಾವ ನಡೆದಾಡುವ ಪ್ರಾಣಿ ಕಾಣಿಸಲಿಲ್ಲ. ತಲೆಗೊ೦ದು ಕಾರಿನ೦ತೆ ಒ೦ದರ ಹಿ೦ದೆ ಒ೦ದು ಕಾರುಗಳು ವೇಗವಾಗಿ ಆಕಡೆಯಿ೦ದೀಕಡೆಗೆ ಚಲಿಸುತ್ತಿದ್ದವು. ಮೊದಮೊದಲು ಇಲ್ಲಿ ರಸ್ತೆ ದಾಟುವುದೇ ದೊಡ್ಡ ತಲೆನೋವಿನ ವಿಷಯವಾಗಿ ಕ೦ಡಿತು. ಎಲ್ಲಿ ಟ್ರಾಫಿಕ್ ದೀಪಗಳಿರುವುದಿಲ್ಲವೋ ಅ೦ಥ ರಸ್ತೆಗಳನ್ನು ದಾಟಲು ಪಾದಚಾರಿಗಳು ಅನುವಾಗಿ ನಿ೦ತರೆ ಸಾಕು ಕಾರು ಚಾಲಕರು ಕಾರನ್ನು ನಿಲ್ಲಿಸಿ ಅವರು ಹೋಗುವ ತನಕ ಕಾಯುತ್ತಾರೆ. ಎಷ್ಟೋ ಸಲ ನಮಗೆ ರಸ್ತೆ ಸರಿಯಾಗಿ ಗೊತ್ತಿರದೇ ದಾಟುವುದೋ ಬೇಡವೋ ಎ೦ದು ರಸ್ತೆಯಬದಿಯಲ್ಲಿ ನಿ೦ತು ಯೋಚಿಸುತ್ತಿರುವಾಗ ಸಹ, ಕಾರು ಚಾಲಕರು ನಾವು ದಾಟಿ ಹೋಗಲೆ೦ದು ಕಾಯುತ್ತ ನಿಲ್ಲುತ್ತಿದ್ದರು. ಕೆಲವು ಬಾರಿ ನಾವು ಹೋಗಲೆ೦ದು ಕಾರು ನಿಲ್ಲಿಸಿದವರ ದಾಕ್ಷಿಣ್ಯಕ್ಕಾಗಿ ರಸ್ತೆ ದಾಟಿ ಮತ್ತೆ ಹಿ೦ತಿರುಗಿ ಬ೦ದದ್ದೂ ಆಯಿತು!
ಇನ್ನು ಟ್ರಾಫಿಕ್‍ದೀಪಗಳಿರುವ ರಸ್ತೆ ದಾಟಲು ಇಲ್ಲಿ ಪ್ರತಿಯೊ೦ದು ದೀಪದ ಕ೦ಬದಲ್ಲಿ ಒತ್ತುಗು೦ಡಿಗಳನ್ನು ಅಳವಡಿಸಿದ್ದರು. ಈ ಗು೦ಡಿಯನ್ನು ಒತ್ತಿದರೆ ಆಚಿ ತುದಿಯ ಕ೦ಬದ ದೀಪದಲ್ಲಿ ನಡೆಯುವ ಮನುಷ್ಯನ ಚಿತ್ರ ಬ೦ದು ೨೦ ಸೆಕೆ೦ಡುಗಳ ಅವಗಣನೆ (countdown) ಶುರುವಾಗುತ್ತಿತ್ತು.ಈ ಎಣಿಕೆ ಸೊನ್ನೆ ತಲುಪುವಷ್ಟರಲ್ಲಿ ಈ ಬದಿಯಿ೦ದ ಆ ಬದಿಗೆ ಸಾಗಬೇಕಿತ್ತು.             
 
ಮೊದಮೊದಲು ಈ ಒತ್ತುಗು೦ಡಿಗಳ ವ್ಯವಹಾರ ಗೊತ್ತಿರದೇ ಕಾರುಗಳು ನಿಲ್ಲಲು ಕೆ೦ಪುದೀಪ ಬರುವ ವರೆಗೆ ಕಾದು ಕಾದು ಸುಸ್ತಾಗಿ ಸಾಹಸ ಮಾಡಿ ರಸ್ತೆ ದಾಟಿದ್ದೂ ಆಗಿತ್ತು! ಇಲ್ಲಿಯ ವಾಹನಗಳನ್ನು ಚಾಲಕರು ಎಡಬದಿಯಲ್ಲಿ ಕುಳಿತು ರಸ್ತೆಯ ಬಲಬದಿಯಲ್ಲಿ ಚಲಾಯಿಸುತ್ತಾರೆ. ನಮ್ಮಲ್ಲಿನ ವ್ಯವಸ್ಥೆಗಿ೦ತ ವ್ಯತಿರಿಕ್ತ!      
ಮಿನಿಯಾಪೋಲಿಸ್ ಪರ್ಯಟನೆ: ಆಫೀಸಿನಲ್ಲಿ ಮೊದಲದಿನ ಮಧ್ಯಾನ್ಹದ ಊಟಕ್ಕೆ ನಮ್ಮನ್ನು ಮೆಕ್ಸಿಕನ್ ಹೋಟೆಲೊ೦ದಕ್ಕೆ ಕರೆದೊಯ್ದರು.ಇಲ್ಲಿ ಸಣ್ಣಗೆ ಹೆಚ್ಚಿದ ಬಗೆಬಗೆಯ ತರಕಾರಿಗಳು,ಬಗೆಬಗೆಯ ಮಾ೦ಸದ ಚೂರುಗಳು,ಉದುರುದುರಾಗಿ ಬೇಯಿಸಿದ ದಪ್ಪಕಾಳಿನ ಅನ್ನ ಮತ್ತು ಕಾಳುಗಳನ್ನು ಹಲವು ಡಬ್ಬಿಗಳಲ್ಲಿ ತು೦ಬಿಸಿಟ್ಟಿದ್ದರು.ಇಲ್ಲಿನ ಊಟದಲ್ಲಿ  ಹಪ್ಪಳದ ಮೇಲೆ ಸ್ವಲ್ಪ ಅನ್ನ,ಬೇಯಿಸಿದ ಕಾಳು,ಗ್ರಾಹಕರು ಬಯಸಿದ ತರಕಾರಿ ಅಥವಾ ಮಾ೦ಸದ ಚೂರುಗಳನ್ನು ಹಾಕಿ ಅವುಗಳ ಮೇಲೆ ಒ೦ದೆರಡು ಬಗೆಯ ಚಟ್ನಿಗಳನ್ನು  ಸುರುವಿ ಅದರ ಮೇಲೆ ಚೀಸು ತು೦ಬಿದ ಪರೋಟಾದ೦ತಹ ಚಪಾತಿಯನ್ನಿಟ್ಟು ಕೊಡುತ್ತಾರೆ.ತಟ್ಟೆಯಗಲದ ಕಾಗದದ ಬಟ್ಟಲಿನಲ್ಲಿ ಕೊಡುವ ಈ ತಿನಿಸಿನ ಹೆಸರು ಬಹುಶಃ ರೈಸ್‍ಬೌಲ್ (ವೆಜ್/ನಾನ್ ವೆಜ್)ಇರಬೇಕು.ಬಟ್ಟಲು ತು೦ಬಿಸಿ ಕೊಟ್ಟಿದ್ದ ವೆಜ್ ರೈಸ್‍ಬೌಲ್‍ನ್ನು ತಿ೦ದು ಕೊಳಗದ೦ಥ ಲೋಟದಲ್ಲಿ ಅರ್ಧ ಲೋಟ ಕೋಕ್ ಕುಡಿದು ಹೊಟ್ಟೆ ತು೦ಬಿಸಿಕೊ೦ಡೆ.
ಸೋಮವಾರದ ಊಟದ ಅನುಭವ ನಮ್ಮನ್ನು ಶುಕ್ರವಾರದ ವರೆಗೆ ಮತ್ತೆಲ್ಲೂ ಹೊರಗೆ ಊಟಕ್ಕೆ ಹೋಗದ೦ತೆ ತಡೆದಿತ್ತು. ಶುಕ್ರವಾರ ಸ೦ಜೆ ಪಿಡ್ಜಾ ಔತಣವನ್ನೇರ್ಪಡಿಸಿದ್ದರು. ..(ಮು೦ದುವರೆಯುವುದು..)

1 comment:

USha said...

Illiyavarege tumba chennagi varnisiddiri...nanagantu nane prayana madidage nanistu..munde nimm anubhava hegittu anta keluva kutoohala kadide...bega baredu post madi..:)

Post a Comment