Monday, September 21, 2026

ಚೊಕ್ರಮುಡಿಯ ಚಾರಣ


ಚೊಕ್ರಮುಡಿಯ ಅರಳಿ ನಿಂತ ನೀಲಕುರಿಂಜಿಯ ಶೃಂಗಾರ
ಪ್ರಕೃತಿಯು ನೀಲಕಂಠನ ಮುಡಿಗೆ ಮಾಡಿದ ಅಲಂಕಾರ
ಕಣ್ಣಳತೆಗೂ ನಿಲುಕದಂತೆ ವಿಸ್ತರಿಸಿಹುದು ನೀಲಸಾಗರ
ಅದ್ಭುತ, ವಿಸ್ಮಯ, ಪ್ರಕೃತಿಯು ಅಚ್ಚರಿಗಳ ಆಗರ


ಹನ್ನೆರಡು ಸಂವತ್ಸರಗಳ ಅಂತರದಿ ಕಾಣುವ ಈ ಶೃಂಗಾರ
ಕೆಲವು ಮಾಸಗಳ ಕಾಲ ಮಾತ್ರ ತೋರುವುದು ತನ್ನ ವೈಯ್ಯಾರ
ನೋಡಲು ಸೇರಿಹುದು ಊಹೆಗೂ ನಿಲುಕದ ಜನಸಾಗರ 
ತಮ್ಮ ಜೀವನಾನುಭವಕ್ಕೆ ಸೇರಿಸಲು ಹೊಸ ವಿಚಾರ

ನೀಲಾಕಾಶದ ಅಂಚಿನ ಗಿರಿ ಶಿಖರ 
ಮೇಘಾವೃತವಾದ ಗಿರಿ ಕಂದರ
ಚಹಾ ತೋಟಗಳ ಹಸಿರ ಚಿತ್ತಾರ
ಕಣ್ಣೆರಡು ಸಾಲದು ನೋಡಲು ಈ ಸೌಂದರ್ಯದ ಸಾಗರ


Tuesday, December 16, 2025

ಒಂಬತ್ತು ಗುಡ್ಡ




ಒಂಬತ್ತು ಗುಡ್ಡದ ಹತ್ತಿರದ ತಾಣ
ಖಾಸಗೀ ಎಸ್ಟೇಟು ತೋಟಗಳ ಕಣ
ಪರಿಚಯದವರಿಗೆ ಮಾತ್ರ ಸಿಗುವ ಆಹ್ವಾನ

ಮೊಬೈಲ್ ಜಾಲ ಇಲ್ಲದ ಕಾರಣ
ಸ್ತಬ್ಧ ಇಲ್ಲಿ ಅವುಗಳ ರಿಂಗಣ
ಪಸರಿಸಿದೆ ಶಾಂತತೆಯ ವಾತಾವರಣ

ಜುಯ್ಯ ಎನ್ನುವ ಕೀಟಗಳ ಮೊರೆತ
ಜಲಪಾತದ ನೀರಿನ ಭೋರ್ಗರೆತ
ಝರಿಗಳ ಜುಳುಜುಳು ನಿನಾದ ಕೇಳಲು ಬಲುಹಿತ

ಇದು ಹತ್ತಾರು ವನ್ಯಜೀವಿಗಳ ವಾಸಸ್ಥಾನ
ಸಾಹಸಮಯ, ಇಲ್ಲಿನ ಸ್ಥಳೀಯರ ಜೀವನ
ನಡೆಸುವರವರು ಕಾಡಿನೊಂದಿಗೆ ಸಹಜೀವನ

ಅಸಾಧ್ಯವಾದರೂ ಒಂಬತ್ತು ಗುಡ್ಡಗಳ ಆರೋಹಣ
ದೊರೆಯಿತು ಪ್ರಕೃತಿಯ ಸೂಕ್ಷ್ಮಾ ವಲೋಕನ
ಮರೆಯಲಾರದ ಸ್ಥಳೀಯರ ಅಕ್ಕರೆಯ ಔತಣ