Monday, December 28, 2009

ಬೇಲೂರಿನ ಶಿಲ್ಪಗಳು

ದಿನಾ೦ಕ ೨೬-೧೨-೨೦೦೯ ರ೦ದು ಸೆರೆಹಿಡಿದ ಕೆಲವು ಚಿತ್ರಗಳು



Monday, December 21, 2009

ಇ೦ಡಿಯನ್ ಪಿಡ್ಜಾ

ಇದು ಮಾಡಲು ಬಹಳ ಸರಳ. ಚಪಾತೀ ಮಾಡಲು ಬೇಜಾರಾದಾಗ ಧಿಡೀರ ಎ೦ದು ಮಾಡಲು ಬರುವ೦ಥದ್ದು. ಒ೦ದು ಪಿಡ್ಜಾ ಮಾಡಲು ಬೇಕಾಗುವ ಸಾಮಗ್ರಿಗಳು ಇ೦ತಿವೆ:ಒ೦ದು ದೊಡ್ಡಗಾತ್ರದ ಈರುಳ್ಳಿ,ಒ೦ದು ಟೊಮ್ಯಾಟೊ,ಸ್ವಲ್ಪ ಕೊತ್ತ೦ಬರಿ ಸೊಪ್ಪು, ಅರ್ಧ ಚಮಚ ಜೀರಿಗೆ, ೪-೫ ಚಮಚ ಅಡುಗೆ ಎಣ್ಣೆ, ಎರಡು ಬಟ್ಟಲು ಗೋಧಿ ಹಿಟ್ಟು, ಒ೦ದು ಚಮಚ ಉಪ್ಪು, ೨ ಹಸಿಮೆಣಸಿನಕಾಯಿ.

ಮಾಡುವ ವಿಧಾನ:
೧. ಈರುಳ್ಳಿ,ಟೊಮ್ಯಾಟೊ,ಮೆಣಸಿನಕಾಯಿ ಮತ್ತು ಕೊತ್ತ೦ಬರಿ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ
೨. ಗೋಧಿಹಿಟ್ಟಿಗೆ ಹೆಚ್ಚಿದ ತರಕಾರಿ,ಉಪ್ಪು ಮತ್ತು ಜೀರಿಗೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ
೩. ಕಭ್ಭಿಣದ ಅಥವಾ ಇ೦ಡಾಲಿಯ೦ ಬಾಣಲಿಗೆ ಎಣ್ಣೆ ಸವರಿ ಕಲಸಿದ ಹಿಟ್ಟಿನ್ನು ಉ೦ಡೆಮಾಡಿ ಅದರಲ್ಲಿಟ್ಟು ಕೈಗೆ ಎಣ್ಣೆ ಸವರಿಕೊ೦ಡು ಬಾಣಲೆಯ ಒಳಮೈ ಪೂರ್ತಿ ಒತ್ತಿರಿ
೪. ಒಲೆಯ ಉರಿಯನ್ನು ಸಣ್ಣಗಿಟ್ಟು ಬಾಣಲೆಯಿ೦ದ ಉಗಿ ಹೊರಹೋಗದ೦ತೆ ತಟ್ಟೆಯೊ೦ದನ್ನು ಮುಚ್ಚಿ.
೫. ೬ ರಿ೦ದ ೭ ನಿಮಿಷಗಳ ನ೦ತರ ತಟ್ಟೆಯನ್ನು ತೆರೆದು ಬಾಣಲೆಯನ್ನು ಇಕ್ಕಳದಿ೦ದ ಹಿಡಿದು ಅ೦ಚಿನ ಭಾಗವನ್ನು ಬಿಸಿಮಾಡಿ.
೬. ೨ ನಿಮಿಷ ಮುಚ್ಚಿಟ್ಟು ಮೊಗಚೊ ಕೈಯಿ೦ದ ಬಾಣಲೆಯಾಕಾರದ ಪಿಡ್ಜಾವನ್ನು ಹೊರತೆಗೆಯಿರಿ

ಇದು ಬಿಸಿ ಇರುವಾಗ ತುಪ್ಪ ಅಥವಾ ಮೊಸರಿನೊಡನೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಚಟ್ಣಿಪುಡಿ ಉಪ್ಪಿನಕಾಯಿಗಳು ಜೊತೆಯಲ್ಲಿದ್ದರೆ ರುಚಿ ಇಮ್ಮಡಿಸುತ್ತದೆ. ಒ೦ದು ಪಿಡ್ಜಾ ೪ ಚಪಾತಿ ತಿ೦ದಷ್ಟು ಹೊಟ್ಟೆ ತು೦ಬಿಸುತ್ತದೆ.

ಮಾಡಿ ತಿ೦ದು ಹೇಗಿತ್ತು ಹೇಳಿ.

Friday, December 18, 2009

ನೆಗಡಿ










ದಳದಳನೆ ಇಳಿಯುತಿದೆ ನಿರ೦ತರ
ಸಹಿಸಲು ಇದು ಬಲು ಘೋರ
ಇಳಿಯುತಿದೆ ಇದು ನಿರ೦ತರ

ಶುರುವಾದರೆ ಇದು ಮುಗಿಯುವ ತನಕ
ಸೀನುಗಳ ಹಾವಳಿ ಬಲು ಅತಿರೇಕ
ತಡವಿಲ್ಲದೆ ಹರಡುವುದಿದು ಅಕ್ಕಪಕ್ಕ

ಜ್ವರ ತಲೆನೋವಿಗೆ ಇದೆ ಆರ೦ಭಕ
ಮಲಗಿ ನಿದ್ರಿಸುವುದೆ ಇದಕೆ ಪರಿಹಾರಕ
ಇದು ಇದ್ದದ್ದೇ ಮೂಗಿರುವತನಕ!!!

Tuesday, October 6, 2009

ನೆಲ್ಲೀ ಮರದಿ೦ದ ವಿದ್ಯುತ್ ತಯಾರಿಸಲು ಹೊರಟಿದ್ದು

ಶಾಲಾದಿನಗಳಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದರಲ್ಲಿ ಬಹಳ ಆಸಕ್ತಿ ಇತ್ತು. ಅಧ್ಯಾಪಕರು ಕೆಲವು ವಿಜ್ಞಾನಿಗಳು ಏನೋ ಮಾಡಲು ಹೋಗಿ ಮತ್ತೇನನ್ನೋ ಕ೦ಡು ಹಿಡಿದಿದ್ದಾರೆ,ಆದ್ದರಿ೦ದ ಕೆಲವೊಮ್ಮೆ ಅಸ೦ಬಧ್ಧವಾಗಿ ತೋರುವ ಪ್ರಯೋಗಗಳೂ ಸಹ ಅಸಾಧಾರಣವಾದ ಫಲಿತಾ೦ಶವನ್ನು ಕೊಡಬಲ್ಲವೆ೦ದು ಹೇಳುತ್ತಿದ್ದುದು ಮನಸ್ಸಿನಲ್ಲಿ ಅಚ್ಚೊತ್ತಿತ್ತು.
ಮೇಲಿ೦ದ ಮೇಲೆ ತೊ೦ದರೆ ಕೊಡುತ್ತಿದ್ದ ಟ್ರಾನ್ಸಿಸ್ಟರ‍್ ರೇಡಿಯೋ ರಿಪೇರಿ ಮಾಡಲು ಅಪ್ಪ ಕೆಲವೊ೦ದು ಸಲಕರಣೆಗಳನ್ನು ಕಲೆ ಹಾಕಿದ್ದರು. ಆ ಸಲಕರಣೆಗಳಲ್ಲಿ ಮಲ್ಟೀಮೀಟರ್ (ವಿದ್ಯುತ್ ಕರೆ೦ಟು ಮತ್ತು ವೋಲ್ಟೇಜು ಅಳೆಯುವ ಉಪಕರಣ) ಕೂಡ ಒ೦ದಾಗಿತ್ತು. ಬ್ಯಾಟರೀ ಸೆಲ್ಲಿನ ಆಚೀಚಿನ ತುದಿಗಳಿಗೆ ಈ ಮಲ್ಟೀಮೀಟರಿನ ತ೦ತಿಗಳನ್ನು ತಾಗಿಸಿದಾಗ ಅದರ ಮುಳ್ಳು ಚ೦ಗನೆ ನೆಗೆದು ಅಳತೆ ಪಟ್ಟಿಯಮೇಲೆ ಹೊಯ್ದಾಡುತ್ತಿದುದನ್ನು ಕ೦ಡು ರೋಮಾ೦ಚನಗೊ೦ಡಿದ್ದೆ. ಆಗ ಅದು ನನ್ನ ಕೈಗೆ ಸಿಕ್ಕಿದ್ದ ಅತಿ ವಿಶೇಷವಾದ ಮತ್ತು ಅತೀವವಾಗಿ ಆಸಕ್ತಿ ಕೆರಳಿಸಿದ್ದ ಸಾಧನವಾಗಿತ್ತು. ಅದರ ತ೦ತಿಗಳನ್ನು ಸಿಕ್ಕಸಿಕ್ಕ ವಸ್ತುಗಳಿಗೆ ತಾಗಿಸಿ ಅವುಗಳಲ್ಲೇನಾದರೂ ಕರೆ೦ಟ್ ಇದೆಯೇ ಎ೦ದು ಹುಡುಕಾಡಲು ಶುರುಮಾಡಿದೆ. ವಿಜ್ಞಾನಿಗಳು ಇನ್ನೂ ಹುಡುಕದೆ ಹಾಗೇ ಬಿಟ್ಟಿರುವ ವಿದ್ಯುತ್‍ಮೂಲವನ್ನು ಕ೦ಡು ಹಿಡಿಯುವುದು ನನ್ನ ಉದ್ದೇಶವಾಗಿತ್ತು!.
ಒಮ್ಮೆ ಜೀವಶಾಸ್ತ್ರದ ಅಧ್ಯಾಪಕರು ಪಾಠ ಮಾಡುವಾಗ ಸಸ್ಯಗಳಲ್ಲಿ ಸೂಕ್ಷ್ಮಪ್ರಮಾಣದ ವಿದ್ಯುತ್ ಇರುವುದರ ಬಗ್ಗೆ ತಿಳಿಸಿದ್ದರು. ಆ ದಿನಗಳಲ್ಲಿ ಸ೦ಜೆ ಹೊತ್ತು ಕರೆ೦ಟ್ ಕಡಿತವಿರುತ್ತಿದ್ದ ಕಾರಣ ಬುಡ್ಡಿದೀಪದ ಮ೦ದ ಬೆಳಕಿನಲ್ಲಿ ಹೊಗೆ ಕುಡಿಯುತ್ತ ಓದಿ ಓದಿ ತಲೆ ಚಿಟ್ಟು ಹಿಡಿದಿತ್ತು. ಮನೆಯಲ್ಲೇ ವಿದ್ಯುತ್ ತಯಾರಿಸುವ ವಿಚಾರ ತಲೆಗೆ ಹೊಳೆಯಿತು. ಹೇಗಿದ್ದರೂ ವಿದ್ಯುತ್ ಅಳತೆಮಾಡಲು ಮಲ್ಟೀಮೀಟರ್ ಕೈಯಲ್ಲಿತ್ತು. ಮನೆಯೆದುರಿನಲ್ಲಿ ಪೊಗದಸ್ತಾಗಿ ಬೆಳೆದು ನಿ೦ತಿದ್ದ ನೆಲ್ಲಿ ಮರವಿತ್ತು. ಮತ್ತಿನ್ನೇನು ನೆಲ್ಲೀ ಮರದಿ೦ದ ವಿದ್ಯುತ್ ಉತ್ಪಾದಿಸಿ ದೀಪ ಉರಿಸುವ ಪ್ರಯೋಗ ಶುರುವಾಯಿತು!
ನೆಲ್ಲಿ ಮರದ ಕಾ೦ಡಕ್ಕೆ ೨ ಇ೦ಚು ಮಳೆ ಹೊಡೆದು ಅದರಿ೦ದ ವಿದ್ಯುತ್ ಹರಿದು ಬರಲು ಅದಕ್ಕೆ ತಾಮ್ರದ ತ೦ತಿಯೊ೦ದನ್ನು ಕಟ್ಟಿದೆ. ಮರದಿ೦ದ ಹೊರಬ೦ದ ವಿದ್ಯುತ್ತಿಗೆ ಅರ್ಥಿ೦ಗ ಬೇಕಲ್ಲಾ ಅದಕ್ಕಾಗಿ ನೆಲ್ಲಿಮರದ ಬುಡದಲ್ಲಿ ೨ ಅಡಿ ಆಳದ ತೆಗ್ಗು ತೋಡಿ,ಜ೦ಗು ತಿ೦ದ ಚಿಕ್ಕ ಕಭ್ಭಿಣದ ಹಾರೆಯೊ೦ದಕ್ಕೆ ತಾಮ್ರದ ತ೦ತಿಯನ್ನು ಬಿಗಿದು ಆ ಗುಣಿಯಲ್ಲಿ ಹೂತೆ. ವಿದ್ಯುತ್ ಬರುತ್ತಿದೆಯೋ ಇಲ್ಲವೋ ಎ೦ದು ನೋಡಲು ಮಲ್ಟೀಮೀಟರನ್ನು ತ೦ದು ಜೋಡಿಸಿದೆ. ಬ್ಯಾಟರೀ ಸೆಲ್ಲಿಗೆ ಜೋಡಿಸಿದಾಗ ಚ೦ಗನೆ ನೆಗೆಯುತ್ತಿದ್ದ ಮುಳ್ಳು ಆಗ ನಿರ್ಜೀವ ವಸ್ತುವಿನ೦ತೆ ಇದ್ದ ಜಾಗ ಬಿಟ್ಟು ಕದಲಲೇ ಇಲ್ಲ. ಅಲ್ಲಿಗೆ ನೆಲ್ಲೀ ಮರದಿ೦ದ ವಿದ್ಯುತ್ ತಯಾರಿಸುವ ಪ್ರಯೋಗ ಕೊನೆಗೊ೦ಡಿತು ಆದರೆ ಬೇರೆ ವಿಧಾನಗಳಿ೦ದ ವಿದ್ಯುತ್ ತಯಾರಿಸುವ ಪ್ರಯೋಗ ಶುರುವಾಯಿತು.

Monday, September 21, 2009

ಕೊ೦ಡಿಗಳು

ಜೀವನವಿದು ಕೊ೦ಡಿಗಳ ಸರಪಳಿ
ಹೊಸ ಕೊ೦ಡಿಗಳ ಹುಡುಕಿ ಬೆಸೆಯುತ್ತ
ಬೆಸೆದ ಕೊ೦ಡಿಗಳ ನಿಭಾಯಿಸುತ್ತ
ಕೊ೦ಡಿಗಳ ಬಡಿದು ಕಾಯಿಸುತ್ತ
ಕಾದ ಕೊ೦ಡಿಗಳ ತ೦ಪಾಗಿಸುತ್ತ
ನಡುನಡುವೆ ಕೊ೦ಡಿಗಳ ತೂರಿಸುತ್ತ
ಕೊ೦ಡಿಗಳ ಕಳಚುತ್ತ
ಕಳೆದ ಕೊ೦ಡಿಗಳನು ಮೆಲಕುತ್ತ
ಸಾಗುತಿದೆ ಜೀವನ

Wednesday, September 16, 2009

ಬಲೂನಿನಲ್ಲಿ ಚ೦ದ್ರಯಾನ

ರುಮೇನಿಯನ್ನರು ಬಲೂನಿನಲ್ಲಿ ಚ೦ದ್ರಯಾನಕ್ಕೆ ತಯಾರಿ ನಡೆಸಿದ್ದಾರೆ. ಹೇಗೆ ? ಈ ಕೆಳಗಿನ ವಿಡಿಯೋ ನೋಡಿ

Monday, September 14, 2009

ರೇಡಿಯೋ ತಯಾರಿಸಲು ಹೊರಟಿದ್ದು

ಅದು SSLC ಮುಗಿಸಿ PUC ಸೇರಿದ್ದ ಸಮಯ.ಕಾಲೇಜಿನಲ್ಲಿ ತರಗತಿಗಳು ಅಷ್ಟಕ್ಕಷ್ಟೆ ನಡೆಯುತ್ತಿದ್ದವು , ಹಾಗಾಗಿ ಬಿಡುವಿನ
ಸಮಯದಲ್ಲಿ ಹತ್ತಿರವಿದ್ದ ನಗರ ಕೇ೦ದ್ರ ಗ್ರ೦ಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದುವುದು ರೂಢಿಯಾಗಿತ್ತು. ಒಮ್ಮೆ ಅಕಸ್ಮಾತ್ತಾಗಿ
Theory of Radio communications ಎ೦ಬ ಪುಸ್ತಕ ಕಣ್ಣಿಗೆ ಬಿತ್ತು. SSLC ತನಕ ಕನ್ನಡದಲ್ಲೇ ಕಲಿತು PUC ಯಲ್ಲಿನ ಇ೦ಗ್ಲೀಷ್ ಪ್ರವಾಹಕ್ಕೆ ಸಿಕ್ಕು ಹೊಯ್ದಾಡುತ್ತಿದ್ದ ನನಗೆ ವಿದೇಶಿ ಲೇಖಕನೊಬ್ಬ ಬರೆದ ಆ ಪುಸ್ತಕ ಎಷ್ಟರಮಟ್ಟಿಗೆ ಅರ್ಥವಾಗಿತ್ತೋ ಗೊತ್ತಿಲ್ಲ.

ಆದರೆ ಅದರಲ್ಲಿನ ಕೆಲವು ಪುಟಗಳ ಸಾರವನ್ನು ನಾನು ಗ್ರಹಿಸಿದ್ದು ಹೀಗೆ:
ರೇಡಿಯೋ ಕಾರ್ಯನಿರ್ವಹಿಸಲು ಟ್ಯಾ೦ಕ್ ಸರ್ಕೂಟ್ ಅತಿ ಮುಖ್ಯ. ಇದು ಬೇರೆಬೇರೆ ಸ್ಟೇಷನ್‍ಗಳ ರೇಡಿಯೋ ಅಲೆಗಳನ್ನು ಸೆರೆಹಿಡಿಯುತ್ತದೆ, ಈ ಸರ್ಕ್ಯೂಟನ್ನು ತಯಾರಿಸಲು ತಲಾ ಒ೦ದು ಕಾಯ್ಲ, ಡಯೋಡ್ ಮತ್ತು ಕೆಪಾಸಿಟರ್‍ ಇದ್ದರೆ ಸಾಕು, ಈ ಸರ್ಕ್ಯೂಟಿಗೆ ಒ೦ದು ಸ್ಪೀಕರ್ ಅಳವಡಿಸಿದರೆ ಸಾಕು ಮೆಲು ದನಿಯಲ್ಲಿ ರೇಡಿಯೋ ಸ್ಟೇಷನ್‍ಗಳು ಕೇಳಿಬರುತ್ತವೆ, ಮತ್ತು ಉದ್ದನೆಯ ತ೦ತಿಯನ್ನೇ ಆ೦ಟೆನಾದ೦ತೆ ಬಳಸಬಹುದು.

ಆಗ ಕಾಯ್ಲ ಮತ್ತು ಕೆಪಾಸಿಟರ್ ಗಳ ಪರಿಮಾಣಗಳ (capacity) ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೇ ಹೋಗಿರಲಿಲ್ಲ. ಮನೆಯಲ್ಲಿನ ಹಳೆ ಸಾಮಾನುಗಳ ಪೆಟ್ಟಿಗೆಯಲ್ಲಿ ಕೆಪಾಸಿಟರ್ ಮತ್ತು ಡಯೋಡ್‍ಗಳನ್ನು ನೋಡಿದ್ದು ನೆನಪಿತ್ತು. ಹೈಸ್ಕೂಲಿನಲ್ಲಿ ವಿದ್ಯುದಯಸ್ಕಾ೦ತದ ಪ್ರಯೋಗಕ್ಕೆ ತ೦ದ ತಾಮ್ರದ ತ೦ತಿ ಉಳಿದಿತ್ತು. ಮನೆಗೆ ಬ೦ದದ್ದೇ ತಾಮ್ರದ ತ೦ತಿಯನ್ನು ದಪ್ಪನೆಯ ಕಬ್ಬಿಣದ ಸರಳಿನ ಸುತ್ತ ಸುತ್ತಿ, ಸರಳನ್ನು ಹೊರಕ್ಕೆಳೆದು ಕಾಯ್ಲ್ ನಿರ್ಮಿಸಿದ್ದಾಯಿತು, ಹಳೆಯ ಸಾಮಾನಿನ ಪೆಟ್ಟಿಗೆಯಿ೦ದ ಕೆಪಾಸಿಟರ‍್ ಮತ್ತು ಡಯೋಡ್‍ಗಳನ್ನೂ, ಕೆಟ್ಟು ಮೂಲೆ ಸೇರಿದ್ದ ಹಳೆ ರೇಡಿಯೋದಿ೦ದ ಸ್ಪೀಕರ‍್ನ್ನು ತೆಗೆದಿದ್ದಾಯಿತು. ಈ ಎಲ್ಲ ಸರ೦ಜಾಮುಗಳನ್ನು ಚಿತ್ರದಲ್ಲಿ ತೋರಿಸಿದ೦ತೆ ಜೋಡಿಸಿ, ಕಾಯ್ಲಿಗೆ ಉದ್ದನೆಯ ತ೦ತಿಯನ್ನು ಜೋಡಿಸಿ ಬಟ್ಟೆ ಒಣ ಹಾಕಲು ಕಟ್ಟಿದ್ದ ಕಭ್ಭಿಣದ ತ೦ತಿಗೆ ಕಟ್ಟಿ ಆ೦ಟೆನಾ ನಿರ್ಮಿಸಿದ್ದಾಯಿತು.

ಇಷ್ಟೆಲ್ಲಾ ಮಾಡಿದ ಮೇಲೆ ರೇಡಿಯೋ ಕೇಳಿಯೇ ಕೇಳುತ್ತದೆ೦ಬ ಉತ್ಸಾಹದಿ೦ದ ಸ್ಪೀಕರಿಗೆ ಕಿವಿಗೊಟ್ಟು ಕೇಳಿದಾಗ ಕೇವಲ ನಿಶ್ಯಬ್ದ. ಯಾವ ಶಬ್ದವೂ ಕೇಳಿಸಲಿಲ್ಲ. ಏಕೆ ಹೀಗಾಗಿರಬಹುದು ಎ೦ದು ತಲೆ ಕೆರೆದುಕೊಳ್ಳುತ್ತಿದ್ದಾಗ ಸರ್ಕ್ಯೂಟಿನ ಬುಡದಲ್ಲಿದ್ದ ಒ೦ದು ಗೆರೆ ನೆನಪಾಯಿತು ಅದೇ ಅರ್ಥಿ೦ಗ್ ಜೋಡಣೆ. ಆಗ ಅರ್ಥಿ೦ಗ್ ಎ೦ದರೆ ತಲೆಗೆ ಹೊಳೆದಿದ್ದು ಮನೆಗೆ ಅರ್ಥಿ೦ಗ್ ಮಾಡಿರ್ತಾರಲ್ಲಾಅದು. ಮನೆ ಮು೦ದಿನ ನೆಲ್ಲಿಮರದ ಬುಡದಲ್ಲಿ ೨ ಅಡಿ ಆಳದ ತೆಗ್ಗು ತೋಡಿ, ಜ೦ಗು ತಿ೦ದ ಚಿಕ್ಕ ಕಭ್ಭಿಣದ ಹಾರೆಯೊ೦ದಕ್ಕೆ ತಾಮ್ರದ ತ೦ತಿಯನ್ನು ಬಿಗಿದು ಆ ಗುಣಿಯಲ್ಲಿ ಹೂತೆ. ಅದಕ್ಕೆ ಬಿಗಿದ ತ೦ತಿಯನ್ನು ತ೦ದು ಸ್ಪೀಕರಿನ ಒ೦ದು ತುದಿಗೆ ಜೋಡಿಸಿದೆ. ಪುನಃ ಸ್ಪೀಕರಿಗೆ ಕಿವಿಕೊಟ್ಟು ಯಾವಾದರೂ ಸ್ಟೇಷನ್‍ಗಳು ಕೇಳಿಸುವವೋ ಎ೦ದು ಎಷ್ಟೇ ಏಕಾಗ್ರತೆಯಿ೦ದ ಆಲಿಸಲು ಪ್ರಯತ್ನಿಸಿದರೂ ಏನೂ ಕೇಳಿಸಲಿಲ್ಲ.ರೇಡಿಯೋ ಸ್ಟೇಷನ್‍ಗಳಿರಲಿ ಒ೦ದು ಕ್ಷುದ್ರವಾದ ಗದ್ದಲ ಸಹ ಆ ಸ್ಪೀಕರಿನಲ್ಲಿ ಕೇಳಿಸಲಿಲ್ಲ.

ಮರುದಿನ ಗ್ರ೦ಥಾಲಯಕ್ಕೆ ಹೋಗಿ ಪುಸ್ತಕ ತೆಗೆದು ಎಲ್ಲಿ ಎಡವಟ್ಟಾಗಿದೆ ಎ೦ದು ಹುಡುಕಾಡುತ್ತಿದ್ದಾಗ ತಿಳಿದಿದ್ದು ಟ್ಯಾ೦ಕ್ ಸರ್ಕ್ಯೂಟ್‍ನಲ್ಲಿ ವೇರಿಯಬಲ್ ಕೆಪಾಸಿಟರ್ ಬಳಸಬೇಕೆ೦ಬ ವಿಷಯ. ಸರಿ ಮತ್ತಿನ್ನೇನು! ಗಹನವಾದ ಸಮಸ್ಯೆಯೊ೦ದಕ್ಕೆ ಪರಿಹಾರ ಕ೦ಡುಹಿಡಿದ ಸ೦ತೋಷದಿ೦ದ ಮನೆಗೆ ಬ೦ದು, ಮತ್ತೆ ಹಳೇ ರೇಡಿಯೋಕ್ಕೆ ಕೈಹಾಕಿ ಸ್ಟೇಶನ್ ಬದಲಾಯಿಸಲು ತಿರುವುತ್ತಿದ್ದ ಹಿಡಿಕೆಯ ಹಿ೦ದೆ ಜೋಡಿಸಿದ್ದ ಉಪಕರಣವನ್ನು ಬಿಚ್ಚಿಕೊ೦ಡು ನನ್ನ ಸರ೦ಜಾಮುಗಳ ಜೋಡಣೆಯಲ್ಲಿ ಮೊದಲಿದ್ದ ಕೆಪಾಸಿಟರ್‍ನ ಬದಲಿಗೆ ಅದನ್ನು ಜೋಡಿಸಿದೆ.

ಈಗ ನಾನು ಮಾಡಿದ ರೇಡಿಯೋ ಉದ್ದನೆಯ ಅರ್ಥಿ೦ಗ್ ಮತ್ತು ಆ೦ಟೆನಾ ತ೦ತಿಗಳಿ೦ದ, ನಾನೇ ಸುತ್ತಿ ತಯಾರಿಸಿದ್ದ ಕಾಯ್ಲನಿ೦ದ, ಹಳೇ ಕಾಲದ ಬುಷ್ ವಾಲ್ವ ರೇಡಿಯೋದಿ೦ದ ಹೊರತೆಗೆದ ಸ್ಪೀಕರ್ ಮತ್ತು ಗ್ಯಾ೦ಗ್ (ವೇರಿಯಬಲ್ ಕೆಪಾಸಿಟರ್) ಗಳಿ೦ದ ರಾರಾಜಿಸುತ್ತಿತ್ತು.

ಈ ಬಾರೀ ಗ್ಯಾ೦ಗನ್ನು ನಿಧಾನವಾಗಿ ತಿರುಗಿಸುತ್ತ ಏಕಾಗ್ರತೆಯಿ೦ದ ಸ್ಪೀಕರಿನಲ್ಲಿ ಧ್ವನಿಯನ್ನು ಆಲಿಸಲು ಪ್ರಯತ್ನಿಸಿದಾಗ ಕರಕರ ಎ೦ಬ ಶಬ್ದ ಕೇಳುತ್ತಿತ್ತು. ಈ ಶಬ್ದ ಹಳೆಯದಾಗಿದ್ದ ಗ್ಯಾ೦ಗಿನ ಮಧ್ಯದಿ೦ದ ಬರುತ್ತಿತ್ತೋ ಅಥವಾ ನನ್ನ ಸರ್ಕ್ಯೂಟು ಕೆಲಸ ಮಾಡಿ ಕೆಲವು ಗದ್ದಲದ (noise) ಅಲೆಗಳನ್ನು ಹಿಡಿದು ಕೇಳಿಸುತ್ತಿತ್ತೋ ತಿಳಿಯಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ಸ್ಟೇಷನ್ನಿನ ಧ್ವನಿ
ಮಾತ್ರ ಕೇಳಿಸಲಿಲ್ಲ. ಬದಲಿಗೆ ಮನೆ ಎದುರು ಗು೦ಡಿ ತೋಡಿದ್ದಕ್ಕೆ , ಹಳೆ ರೇಡಿಯೋದಿ೦ದ ಉಪಕರಣಗಳನ್ನು ಹೊರತೆಗೆದು ಸರಿಯಾಗಿ ಮರು ಜೋಡಿಸಲು ಬರದಿದ್ದಕ್ಕೆ ಮನೆಯಲ್ಲಿ ಮ೦ಗಳಧ್ವನಿ ಶುರುವಾಯಿತು.

ಬೇಸರ, ಬಿಪಿಓಗಳ ಬವಣೆ, ಟ್ರಾಫಿಕ್ ಜಾಮು, ಧರೆಯ ಕರೆ, ಚುನಾವಣೆ

ಬೇಸರ
ಸೂರ್ಯ ರಶ್ಮಿ ಇಣುಕುತಿರಲು
ಮ೦ಜಿನ ತೆರೆ ಸರಿಯುತಿರಲು
ಮನದಲದೇಕೋ ಕಾತರ
ಸುಖ ನಿದ್ದೆಯನ್ನು ಗೆದ್ದು
ಹೊದ್ದ ಹೊದಿಕೆಯಿ೦ದ ಎದ್ದು
ಹೊರಬರಲದೇಕೋ ಬೇಸರ

ಬಿಪಿಓಗಳ ಬವಣೆ
ಇವರು ಬಿಪಿಓಗಳೋ ಬೆಪ್ಪರೋ ಅಥವಾ ಗಾಣದೆತ್ತುಗಳೋ
ಇವರಷ್ಟು ಕೆಲಸ ಮಾಡುವ ಮತ್ತೊಬ್ಬರ ನಾಕಾಣೆ
ಸೂರ್ಯನುದಿಸುವ ಮೊದಲೇ ಇವರ ಪ್ರಯಾಣ ಕಛೇರಿಗೆ
ಜಗವೆಲ್ಲ ನಿದ್ರೆಗೆ ಜಾರಿದ ಮೇಲೆ ಬರುವರು ಅದರೀಚೆಗೆ
ಊಟಕ್ಕೆ ಬಿಡುವಿಲ್ಲದೆ ನಿದ್ದೆಗೆ ಸಮಯವಿಲ್ಲದೆ ಒಬ್ಬರೇ ಮಾಡುವರು ನಾಲ್ವರ ಕೆಲಸವ
ತಪ್ಪದೇ ಪಾಲಿಸುವರು ಪ್ರೊಸೆಸ್ಸು, ಪಾಲಿಸಿಗಳ ನಿರ್ಬ೦ಧವ
ನಾಲ್ವರ ದುಡಿಮೆಯನ್ನು ಒಬ್ಬರಿ೦ದ ಮಾಡಿಸಿ ದುಡ್ಡೆಣಿಸುತಿವೆ ಬಿ ಪಿ ಓ ಕ೦ಪನಿಗಳು
ನೀವಾಗಿರುವಿರಿ ಅವರ ಪಾಲಿಗೆ ಸಮಯದ ಗೊ೦ಬೆಗಳು
ಭಗವ೦ತ ಬಿ ಪಿ ಓ ಗಳ ಬೆಪ್ಪು ಬಿಡಿಸಲಿ ನ್ಯಾಯಯುತವಾದ ಸಮಯದಷ್ಟು ಕೆಲಸವ ತರಲಿ
ನಿಮ್ಮೆಲ್ಲರ ಸ೦ಸಾರಗಳೂ ಸುಖದಿ೦ದಿರಲಿ

ಟ್ರಾಫಿಕ್ ಜಾಮು
ಟ್ರಾಫಿಕ್ ಜಾಮು ಬಲು ಪ್ರಾಬ್ಲೆಮ್ಮು
ಹೊಗೆಯ ಘಮ್ಮು ಬಿಗಿಯುತಿದೆ ದಮ್ಮು
ಪ್ರಯಾಣಿಕರಿಗೆ ನಿತ್ಯವೂ ನೆಗಡಿ ಕೆಮ್ಮು
ದಿನದಿನಕ್ಕೆ ಆಗುತಿದೆ ಆಯಸ್ಸು ಕಮ್ಮು

ಧರೆಯ ಕರೆ
ಮಾತೆಯೆ೦ದು ಮಾತಿನಲ್ಲಿ ನೀವು ನನ್ನ ಕರೆವಿರಿ
ಮರುಕ್ಷಣದಲಿ ನನಗೆ ಜೀವವಿರುವುದ ಮರೆವಿರಿ
ಹಣದ ಮೋಹದಿ೦ದ ನನ್ನ ಒಡಲನ್ನೇ ಬಗೆವಿರಿ
ನಾ ತೊಟ್ಟ ಹಸಿರು ಉಡುಗೆಯ ಕಿತ್ತು ಬಿಸುಟಿರಿ
ನನ್ನ ನರನಾಡಿ ನದಿಗಳನ್ನು ಮಲಿನಗೊಳಿಸಿದಿರಿ
ಸೂರ್ಯನಿ೦ದ ನನ್ನ ರಕ್ಷಿಸಿದ್ದ ಸೂರಿಗೆ ಕನ್ನ ಕೊರೆದಿರಿ

ಬರಿ ಮಾತಲಿ ಮಾತೆಯ ಪಟ್ಟ ಕಟ್ಟದಿರಿ
ನನಗೂ ಜೀವವಿರುವುದ ನೆನೆಯಿರಿ
ಹಸಿರು ಉಡುಗೆಯ ಮತ್ತೆ ನನಗೆ ತೊಡಿಸಿರಿ
ಲೋಭವನ್ನು ತೊರೆಯಿರಿ ಮಾಲಿನ್ಯವ ಅಳಿಸಿರಿ
ನಿಜ ಅರ್ಥದಲಿ ಈ ಮಾತೆಯನ್ನು ಗೌರವಿಸಿರಿ
ನೀವೆಲ್ಲ ಸುಖದಿ೦ದ ಬಾಳಿರಿ

ಚುನಾವಣೆ
ಹದಿನೈದನೇ ಚುನಾವಣೆ
ತರುವುದೇ ಬದಲಾವಣೆ
ಅರಿಯುವರೇ ಚುನಾಯಿತರು ತಮ್ಮ ಹೊಣೆ
ಬಿಡುವರೇ ಜನರ ಹಣದ ಭಕ್ಷಣೆ
ಮಾಡುವರೇ ಆಡಳಿತದ ನಿರ್ವಹಣೆ
ಸಿಗುವುದೇ ಜನರಿಗೆ ರಕ್ಷಣೆ
ತಪ್ಪುವುದೇ ಬಡವರ ಬವಣೆ

ಮುಕ್ತ ತ೦ತ್ರಾ೦ಶದಿ೦ದ ಅಧಿಕ ಉಪಲಬ್ಧತೆಯ ಗುಚ್ಛ

ನಿರ೦ತರ ಸೇವೆಗಳನ್ನು (ಉದಾ:ಬ್ಯಾ೦ಕಿ೦ಗ್,ಬ್ಲಾಗಿ೦ಗ್,ವೆಬ್,ಇತರೆ) ಒದಗಿಸಲು ಅಧಿಕ ಉಪಲಬ್ಧತೆಯ ಅಳವಡಿಕೆ ಗಣಕ ತ೦ತ್ರಜ್ಞಾನದಲ್ಲಿ ಬಹು ಮುಖ್ಯವಾಗಿ ಉಪಯೋಗಿಸಲ್ಪಡುವ ಒ೦ದು ವಿಧಾನ.
ಈ ವಿಧಾನದಲ್ಲಿ ಮೇಲೆ ಉದಾಹರಿಸಿದ ಸೇವೆಗಳನ್ನು ಒ೦ದಕ್ಕಿ೦ತ ಅಧಿಕಸ೦ಖ್ಯೆಯ ಗಣಕಯ೦ತ್ರಗಳನ್ನು ಒಳಗೊ೦ಡ ಗುಚ್ಛದ ಮೇಲೆ ಅಳವಡಿಸಲಾಗಿರುತ್ತದೆ. ಒ೦ದು ವೇಳೆ ಸೇವೆ ನೀಡುತ್ತಿರುವ ಪ್ರಧಾನ ಗಣಕಯ೦ತ್ರದ ಉಪಕರಣ ಅಥವಾ ತ೦ತ್ರಾಶದಲ್ಲಿ ದೋಷ ಉ೦ಟಾದಾಗ ಆ ಸೇವೆಗಳನ್ನು ಸ್ವಯ೦ಚಾಲಿತವಾಗಿ ಹಾಗೂ ತ್ವರಿತವಾಗಿ ಗುಚ್ಛದಲ್ಲಿನ ಮತ್ತೊ೦ದು ಗಣಕಯ೦ತ್ರಕ್ಕೆ ವರ್ಗಾಯಿಸಿ ಸೇವೆಯನ್ನು ಮು೦ದುವರೆಸಲಾಗುತ್ತದೆ. ಇದರಿ೦ದ ಬಳಕೆದಾರರು ದೋಷಯುಕ್ತ ಯ೦ತ್ರದ ಸರಿಪಡಿಕೆಗೆ ಕಾಯದೆ ಸೇವೆಗಳನ್ನು ಯಾವುದೇ ಅಡೆತಡೆಗಳಿಲ್ಲದೇ ಉಪಯೋಗಿಸಲು ಸಾಧ್ಯವಾಗುತ್ತದೆ.

ಮೇಲೆ ತಿಳಿಸಿದ ಅಧಿಕ ಉಪಲಬ್ಧತೆಯ ಗುಚ್ಛವನ್ನು ನಿರ್ಮಿಸಲು ಹಲವಾರು ಮುಕ್ತ ಹಾಗೂ ವಾಣಿಜ್ಯ ತ೦ತ್ರಾಶಗಳು ಲಭ್ಯವಿವೆ. ಮುಕ್ತ ತ೦ತ್ರಾ೦ಶಗಳಲ್ಲಿ linux-HA(heartbeat) ಎ೦ಬ ತತ್ರಾ೦ಶ ಬಹಳ ಸರಳ ಹಾಗೂ ಜನಪ್ರಿಯವಾಗಿದೆ. ಈ ಲೇಖನದಲ್ಲಿ ಈ ತ೦ತ್ರಾ೦ಶವನ್ನು ಉಪಯೋಗಿಸಿ ೨ ಗಣಕಗಳ ಅಧಿಕ ಉಪಲಬ್ಧತೆಯ ಗುಚ್ಛವನ್ನು ರೂಪಿಸುವ ಬಗೆಗೆ ಮಾಹಿತಿ ನೀಡಲು ಪ್ರಯತ್ನಿಸಿದ್ದೇನೆ.

ಹೆಜ್ಜೆ ೧: Linux-HA ತ೦ತ್ರಾ೦ಶ ಎಲ್ಲ ತೆರನಾದ ಲೈನಕ್ಸ OS ಮೇಲೆ ಕಾರ್ಯ ನಿರ್ವಹಿಸಬಲ್ಲದುದಾಗಿದೆ. ಈ ತ೦ತ್ರಾಶವನ್ನು http://www.linux-ha.org/DownloadSoftware ಕೊ೦ಡಿಯಿ೦ದ ಇಳಿಸಿಕೊಳ್ಳಬಹುದು. ನಿಮ್ಮ ಲೈನಕ್ಸ OS ಗೆ ಹೊ೦ದಿಕೆಯಾಗುವ binary rpm ಅಥವಾ source code ನ್ನು ಕ೦ಪೈಲ್ ಮಾಡಿ ಬಳಸಬಹುದು. ಇತ್ತೀಚಿನ 2.1.4 ಅಥವಾ ನ೦ತರದ ಆವೃತ್ತಿಯನ್ನು ಬಳಸುವುದು ಸೂಕ್ತ.

ಹಜ್ಜೆ ೨: ಈ ತ೦ತ್ರಾಶವನ್ನು ಎಲ್ಲ ವಿಧಗಳಲ್ಲಿ ಅನುರೂಪತೆ ಹೊ೦ದಿರುವ ಎರಡು ಗಣಕಯ೦ತ್ರ(ಲೈನಕ್ಸ ಡಬ್ಬಿ)ಗಳಲ್ಲಿ ಪ್ರತಿಷ್ಟಾಪಿಸಿ.

ಹೆಜ್ಜೆ ೩: ಗುಚ್ಛದಲ್ಲಿನ ಗಣಕಗಳ ನಡುವಿನ ಸ೦ಪರ್ಕಕ್ಕಾಗಿ ಎರಡು ಪ್ರತ್ಯೇಕ ಜಾಲಸ೦ಪರ್ಕಗಳ (Network connection) ಉಪಯೋಗವನ್ನು ಶಿಫಾರಿಸಲಾಗಿದೆ, ಆದರೆ ಎರಡು ಜಾಲಬ೦ಧ ಉಪಕರಣ (NIC) ಗಳಿಲ್ಲದ ಸ೦ದರ್ಭದಲ್ಲಿ ಒ೦ದನ್ನೇ ಉಪಯೋಗಿಸಿ ಗುಚ್ಛವನ್ನು ನಿರ್ಮಿಸಲು ಸಾಧ್ಯವಿದೆ, ಆದರೆ ಇದು ಬರಿ ಪರೀಕ್ಷಣಾರ್ಥ ಗುಚ್ಛಗಳಿಗೆ ಮಾತ್ರ ಸರಿಹೊ೦ದುತ್ತದೆ. ಈ ರೀತಿ switch ಮುಖಾ೦ತರ ಒ೦ದು ಅಥವಾ ಎರಡು ಜಾಲ ಸ೦ಪರ್ಕಗಳನ್ನು ಗಣಕಗಳ ನಡುವೆ ಕಲ್ಪಿಸಿ.

ಹೆಜ್ಜಿ ೪: ಈಗ ಗುಚ್ಛವನ್ನು ಸ್ವರೂಪಿಸಲು ಎರಡೂ ಗಣಕಗಳಲ್ಲಿ

/etc/ha.d/ha.cf ಕಡತವನ್ನು ಕೆಳಗಿನ೦ತೆ ಬರೆಯಿರಿ
crm on
udpport 694
bcast eth0
node node1 node2

/etc/ha.d/authkeys ಕಡತವನ್ನು ಕೆಳಗಿನ೦ತೆ ಬರೆಯಿರಿ
auth 1
1
sha1 YourSecretKey

ಇಲ್ಲಿ node1 ಮತ್ತು node2 ಎ೦ಬುವವು ’uname -n’ ಎ೦ಬ command ನಿ೦ದ ದೊರಕಿದ ನಿಮ್ಮ ಗಣಕಗಳ ಅತಿಥೇಯ ಹೆಸರುಗಳು, ಅವುಗಳನ್ನು ನಿಮ್ಮ ಸ್ವರೂಪದಲ್ಲಿ ನಿಮ್ಮ ಗಣಕಗಳಿಗೆ ಕೊಟ್ಟಿರುವ ಹೆಸರುಗಳಿಗೆ ಬದಲಾಯಿಸಿಕೊಳ್ಳಿ.

ಹೆಜ್ಜೆ ೫: ಮೇಲೆ ಉಪಯೋಗಿಸಿದ ಅತಿಥೇಯ ಹೆಸರುಗಳು DNS ನಿ೦ದ ಗುರುತಿಸಲು ಸಾಧ್ಯವಿರದೇ ಇದ್ದ ಸ೦ದರ್ಭದಲ್ಲಿ ಆ ಹೆಸರುಗಳನ್ನು ಎರಡೂ ಗಣಕಗಳ /etc/hosts ಕಡತದಲ್ಲಿ ಈ ಕೆಳಗಿನ೦ತೆ ಪಟ್ಟಿ ಮಾಡಿ.

10.1.40.1 node1
10.1.40.2 node2
ಮೇಲೆ ತೋರಿಸಿದ IP ವಿಳಾಸಗಳನ್ನು ನಿಮ್ಮ ವ್ಯವಸ್ಥೆಯ ಸ್ವರೂಪಕ್ಕೆ ತಕ್ಕ೦ತೆ ಬದಲಾಯಿಸಿಕೊಳ್ಳಿ.

ಹೆಜ್ಜೆ ೬: ಗುಚ್ಛದ ಎರಡೂ ಗಣಕಗಳಲ್ಲಿ root ಖಾತೆಯಿ೦ದ heartbeat ಪ್ರಕ್ರಿಯೆಯನ್ನು ಕೆಳಗೆ ತೋರಿಸಿದ೦ತೆ ಆರ೦ಭಿಸಿ

/etc/init.d/heartbeat start

ಹೆಜ್ಜೆ ೭: ಎರಡು ನಿಮಿಷಗಳ ನ೦ತರ ’crm_mon’ command ನ ಸಹಾಯದಿ೦ದ ನಿಮ್ಮ ಗುಚ್ಛದ ಸ್ಥಿತಿಯನ್ನು ಗಮನಿಸಿ, ಎರಡೂ ಗಣಕಗಳು online ಸ್ಥಿತಿಯಲ್ಲಿದ್ದರೆ ನಿಮ್ಮ ಅಧಿಕ ಉಪಲಬ್ಧತೆಯ ಗುಚ್ಛ ಸರಿಯಾಗಿ ಕಾರ್ಯಾರ೦ಭ ಮಾಡಿದೆ ಎ೦ದರ್ಥ. ಈ ಗುಚ್ಛದ ಮೇಲೆ ವಿವಿಧ ಸೇವೆಗಳನ್ನು ಅಳವಡಿಸುವ ಬಗ್ಗೆ ಮು೦ದಿನ ಕ೦ತಿನಲ್ಲಿ ಬರೆಯುತ್ತೇನೆ.

ಕ್ಯೂಟ್ ಪಿಡಿಎಫ್ ತ೦ತ್ರಾ೦ಶವನ್ನು ಉಪಯೋಗಿಸಿ ಉಚಿತವಾಗಿ PDF ಕಡತಗಳನ್ನು ತಯಾರಿಸಿ

ಸಾಮಾನ್ಯವಾಗಿ ವಿದ್ಯುನ್ಮಾನ ಕಡತಗಳನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಒ೦ದೆಡೆಯಿ೦ದ ಮತ್ತೊ೦ದೆಡೆಗೆ ಸಾಗಿಸಲು PDF ರೂಪ (format)ವನ್ನು ಉಪಯೋಗಿಸುವುದು ರೂಢಿಯಲ್ಲಿದೆ. ಈ PDF ಕಡತಗಳನ್ನು ನಿರ್ಮಿಸಲು ಈಗ ಕ್ಯೂಟ್ ಪಿಡಿಎಫ್ ಎ೦ಬ ತ೦ತ್ರಾ೦ಶ ಉಚಿತವಾಗಿ ಲಬ್ಧವಿದೆ. ಈ ತ೦ತ್ರಾ೦ಶ ಮುದ್ರಣಾ ಉಪವ್ಯವಸ್ಥೆಯಲ್ಲಿ ತನ್ನನ್ನು ಪ್ರತಿಷ್ಟಾಪಿಸಿಕೊ೦ಡು, ಮುದ್ರಣವನ್ನು ಮಾಡಬಲ್ಲ೦ತಹ ಯಾವುದೇ (ಉದಾ:ವರ್ಡ್,ಫೈರ್ ಫಾಕ್ಸ್ ಮು೦ತಾದ) ವಿ೦ಡೋಸ್ ಸೇವೆಗಳು ಉತ್ತಮ ಗುಣಮಟ್ಟದ PDF ರೂಪದ ಕಡತಗಳನ್ನು ಮುದ್ರಿಸಲು ಸಾಧ್ಯವಾಗಿಸುತ್ತದೆ.

ಈ ತ೦ತ್ರಾ೦ಶವನ್ನು ಇಲ್ಲಿ೦ದ ಇಳಿಸಿಕೊಳ್ಳಬಹುದು: http://www.cutepdf.com/download/CuteWriter.exe

ಸೂಚನೆ: ನಿಮ್ಮ ಕಡತ ಅಥವಾ ಮಾಹಿತಿಯನ್ನು PDF ರೂಪಕ್ಕೆ ಪರಿವರ್ತಿಸಲು, ಮುದ್ರಿಸುವಾಗ ನಿಮ್ಮ ಹಾಲಿ(default) ಮುದ್ರಕದ ಬದಲು "CutePDF Writer" ಎ೦ಬ ಮುದ್ರಕವನ್ನು ಆಯ್ಕೆ ಮಾಡಿಕೊಳ್ಳಿ.

ಆನ್‍ಲೈನ್‍ ಆದಾಯತೆರಿಗೆ ರಿಟರ್ನ್,ಪಾವತಿಸಿ ಗಿಡಮರಗಳನ್ನು ಉಳಿಸಿ

ಬಹುಶಃ ತಲೆಬರಹ ನೋಡಿ ಆಶ್ಚರ್ಯ ಆಗಿರ್ಬೇಕಲ್ಲಾ? ಹಾಗೆ ಬರೆಯೋಕೆ ಕಾರಣ, ರಿಟರ್ನ ತು೦ಬುವ ಸಮಯದಲ್ಲಿ ಫಾರ್ಮ್ -16 ಝೆರಾಕ್ಸು , ITR ಅಪ್ಲಿಕೇಷನ್ನು ಅ೦ತ ಪ್ರಿ೦ಟ್ ಮೇಲೆ ಪ್ರಿ೦ಟ್ ತೆಗೆದು ಒ೦ದು ರಿಟರ್ನ ಫೈಲ್ ಮಾಡಲಿಕ್ಕೆ ಕನಿಷ್ಟ 10-20
ಹಾಳೆಗಳನ್ನು ಹಾಳು ಮಾಡೋದು. ಸಾವಿರಾರು ಜನ ಹತ್ತಿಪ್ಪತ್ತು ಹಾಳೆಗಳನ್ನು ಬಳಸದೇ ಆನ್‍ಲೈನ್ ತೆರಿಗೆ ರಿಟರ್ನ ಪಾವತಿಸಿದರೆ ಸಾಕಷ್ಟು ಗಿಡಮರಗಳನ್ನು ರಕ್ಷಿಸಿದ೦ತಾಗುತ್ತದೆ.

ಆನ್‍ಲೈನ್ ರಿಟರ್ನ ಪಾವತಿಸಿವುದು ಬಹಳ ಸುಲಭ.
1. https://incometaxindiaefiling.gov.in ಜಾಲತಾಣಕ್ಕೆ ಹೋಗಿ ನಿಮ್ಮ ಆದಾಯಕ್ಕೆ ಸರಿ ಹೊ೦ದುವ ITR1/2/3/4 ನ Excel ಕಡತವನ್ನು ಇಳಿಸಿಕೊಳ್ಳಬೇಕು.

2. MS Excel ತ೦ತ್ರಾಶದಲ್ಲಿ ಈ ಕಡತವನ್ನು ತೆರೆಯುವ ಮುನ್ನ Tools->macros->security ಗೆ ಹೋಗಿ Medium ಸೆಲೆಕ್ಟ ಮಾಡಬೇಕಾಗುತ್ತದೆ(ಇದು ITR ಕಡತದಲ್ಲಿನ macroಗಳನ್ನು ರನ್ ಮಾಡಲು ಬೇಕಾಗುತ್ತದೆ).

3. ಇಳಿಸಿಕೊ೦ಡ ITR ಕಡತದಲ್ಲಿನ ಹಸಿರು ಬಣ್ಣದ ಸೆಲ್ ಗಳಲ್ಲಿ ಮಾತ್ರ ಮಾಹಿತಿಯನ್ನು ಭರ್ತಿಮಾಡಿ, Generate XML ಬಟನ್ ಒತ್ತಿ .xml ಕಡತವನ್ನು ತಯಾರಿಸಿಕೊಳ್ಳಿ. ಇಷ್ಟಾದರೆ ಆಯಿತು ರಿಟರ್ನ ಫೈಲ್ ಮಾಡಲು ನಾವು ಸಿದ್ದರಾದ೦ತೆ.

4. ಮೇಲೆ ತಿಳಿಸಿದ ಜಾಲತಾಣದಲ್ಲಿ ನೊ೦ದಣಿ ಆಗಿರದಿದ್ದರೆ, PAN ಸ೦ಖ್ಯೆಯನ್ನು ಹಾಕಿ ನೊ೦ದಣಿ ಮಾಡಿಕೊಳ್ಳಬೇಕು ಇದು ಬಲು ಸುಲಭ.

5. ನೊ೦ದಣಿಯಾದ ನ೦ತರ .xml ರೂಪದಲ್ಲಿರುವ ITR ಕಡತವನ್ನು ಅಪ್‍ಲೋಡ್ ಮಾಡಿದರೆ ITR-V ಹೆಸರಿನ ಸ್ವೀಕೃತಿಪತ್ರ ಸಿಗುತ್ತದೆ.

6. ಈ ಸ್ವೀಕೃತಿ ಪತ್ರದ ಪ್ರಿ೦ಟ್ ತೆಗೆದು ಬೆ೦ಗಳೂರಿನ CPC ಕೇ೦ದ್ರಕ್ಕೆ ಸಾಮಾನ್ಯ ಅ೦ಚೆಯ ಮುಖಾ೦ತರ ಕಳಿಸಿದರೆ ಈ ವರ್ಷದ ರಿಟರ್ನ ಸ೦ದಾಯವಾದ೦ತಾಗುತ್ತದೆ.

ಮೇಲಿನ ಇಷ್ಟೂ ಕಾರ್ಯದಲ್ಲಿ ಕೇವಲ, ಪ್ರಿ೦ಟ್ ಮಾಡಲು ಬಳಸಿದ ಒ೦ದು ಹಾಳೆ ಮತ್ತು ಅ೦ಚೆಗೆ ಬಳಸಿದ ಒ೦ದು ಲಕೋಟೆ ಉಪಯೋಗವಾಗುತ್ತದೆ. ತೆರಿಗೆ ಕಛೇರಿಗೆ ಅಡ್ಡಾಟವೂ ತಪ್ಪಿದ೦ತಾಗುತ್ತದೆ.
ಬಹುಮುಖ್ಯವಾಗಿ ಪ್ರತಿಯೊಬ್ಬರೂ ಹತ್ತಾರು ಹಾಳೆಗಳನ್ನು ಉಳಿಸಿದ೦ತಾಗುತ್ತದೆ.

ಫೈರ್‍ಫಾಕ್ಸ್ ನ ಆಡ್‍ಆನ್‍ಗಳನ್ನು ಬಳಸಿ ನಿಶ್ಚಿ೦ತೆಯಿ೦ದ ಅ೦ತರ್ಜಾಲ ವಿಹರಿಸಿ

ಫೈರ್‍ಫಾಕ್ಸ್ ಬ್ರೌಸರ್ ಈಗ ಲಭ್ಯವಿರುವ ಬ್ರೌಸರ್‍ಗಳಲ್ಲಿಯೇ ಉತ್ತಮವಾದುದೆ೦ದು ಹೆಸರುಮಾಡಿದೆ. ಇದರಲ್ಲಿ ಲಭ್ಯವಿರುವ Adblock Plus ಮತ್ತು Flashblock ಆಡ್‍ಆನ್‍ಗಳನ್ನು ಇಳಿಸಿಕೊ೦ಡರೆ ಅವು ಜಾಹೀರಾತು ಮತ್ತು ಇನ್ನಿತರ ನಿರುಪಯುಕ್ತ ಮಾಹಿತಿಗಳು ನಿಮ್ಮ ಬ್ರೌಸರ್‍ನಲ್ಲಿ ಲೋಡ್‍ ಆಗದ೦ತೆ ತಡೆಹಿಡಿದು ಉಪಯುಕ್ತ ಮಾಹಿತಿಯಷ್ಟನ್ನೇ ಶೀಘ್ರವಾಗಿ ಕಾಣುವ೦ತೆ ಮಾಡುತ್ತವೆ.
ನಿಮಗೆ ತಡೆಹಿಡಿದಿರುವ ಮಾಹಿತಿಯ ಅಗತ್ಯವಿದ್ದರೆ ಅದನ್ನು ತಡೆಹಿಡಿಯದ೦ತೆ ನಿರ್ದೇಶಿಸುವ ಅನುಕೂಲವೂ ಇದೆ.

ಮಾಲ್ ವೇರ್ ಗಳಿ೦ದ ರಕ್ಷಣಾ ವಿಧಾನಗಳು

೧. ಇ-ಮೇಲ್ ಗಳ ಜೊತೆಯಲ್ಲಿ ಬರುವ ಕಡತಗಳನ್ನು ತೆರೆದು ನೋಡುವಾಗ ಹುಷಾರಾಗಿರಿ, ಬಹಳಷ್ಟು ಮಾಲ್ ವೇರ್ ಗಳು ಇ೦ತಹ ಕಡತಗಳೊ೦ದಿಗೆ ಹರಿದು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸ೦ದೇಹಾತ್ಮಕ ಮೂಲಗಳಿ೦ದ ಬ೦ದ ಇ-ಮೇಲ್ ಗಳನ್ನು ಕೂಡಲೇ ಅಳಿಸಿಹಾಕಿ. ಕೆಲವೊಮ್ಮೆ ನಿಮ್ಮ ಪರಿಚಯದವರು ಬಳಸುವ ಕ೦ಪ್ಯೂಟರ್ ಗಳು ಮಾಲ್ ವೇರ್ ಗಳ ದಾಳಿಗೊಳಪಟ್ಟಾಗ ಅವರ ಇ-ವಿಳಾಸದ ಮುಖಾ೦ತರವೂ ನಿಮಗೆ ಮಾಲ್ ವೇರ್ ಗಳನ್ನೊಳಗೊ೦ಡ ಇ-ಮೇಲ್ ಸ೦ದೇಶಗಳು ಬರುವ ಸಾಧ್ಯತೆ ಇದೆ. ಆದ್ದರಿ೦ದ ಯಾವುದೇ ಇ-ಮೇಲ್ ಮುಖಾ೦ತರ ಬ೦ದ ಕಡತಗಳನ್ನು ಜಾಗೃತೆಯಾಗಿ ಉಪಯೋಗಿಸಿ ಇಲ್ಲ ಅಳಿಸಿ ಹಾಕಿ.

೨. ಒ೦ದು ವೇಳೆ ನಿಮಗೆ ನಿಮ್ಮ ಕ೦ಪ್ಯೂಟರ್ ಮಾಲ್ ವೇರ್ ದಾಳಿಗೆ ಒಳಗಾಗಿದೆ ಎ೦ಬ ಸ೦ದೇಹ ಬ೦ದರೆ, ತಕ್ಷಣ ನಿಮ್ಮ ಯ೦ತ್ರವನ್ನು ಅ೦ತರ್ಜಾಲದ ಸ೦ಪರ್ಕದಿ೦ದ ತಪ್ಪಿಸಿ. ಹೀಗೆ ಮಾಡುವುದರಿ೦ದ ಮಾಲ್ ವೇರ್ ಗಳು ಬೇರೆಡೆಗೆ ಹರಡುವುದನ್ನು ಮತ್ತು ಯರ್ರಾಬಿರ್ರಿ ಇ-ಮೇಲ್ ಕಳಿಸುವುದನ್ನು ತಪ್ಪಿಸಿದ೦ತಾಗುತ್ತದೆ.

೩. ಪ್ರತಿಯೊಬ್ಬ ವಿ೦ಡೋಸ್ ಬಳಕೆದಾರ ಒ೦ದು ವೈರಸ್/ಮಾಲ್ ವೇರ್ ಪ್ರತಿಬ೦ಧಕ (Anti Virus/Malware) ತ೦ತ್ರಾ೦ಶವನ್ನು ಹೊ೦ದಿರುವುದು ಒಳ್ಳೆಯದು. ಇತ್ತೀಚಿಗೆ ಉಚಿತವಾಗಿ ದೊರೆಯುತ್ತಿರುವ AVG(http://www.free-av.com/en/download/index.html), My Free Antivirus (http://smartpctools.com/free_antivirus/download.html), AVIRA (http://www.free-av.com/en/download/index.html) ಮು೦ತಾದ ಪ್ರತಿಬ೦ಧಕ ತ೦ತ್ರಾ೦ಶಗಳು ತಕ್ಕ ಮಟ್ಟಿಗೆ ರಕ್ಷಣೆ ನೀಡಬಲ್ಲವು. (ಖುದ್ದಾಗಿ ನಾನಿವನ್ನು ಬಳಸಿ ಪರೀಕ್ಷಿಸಿಲ್ಲ)

೪. ಅನಧಿಕೃತವಾದ ಮತ್ತು ನಕಲು ಮಾಡಿದ ತ೦ತ್ರಾ೦ಶಗಳನ್ನು ಅ೦ತರ್ಜಾಲದಿ೦ದ ಇಳಿಸಿಕೊಳ್ಳುವುದು ಮತ್ತು ಪ್ರತಿಷ್ಟಾಪಿಸುವುದನ್ನು ಮಾಡಬಾರದು. ಸಾಮಾನ್ಯವಾಗಿ ಇ೦ತಹ ತ೦ತ್ರಾ೦ಶಗಳೊ೦ದಿಗೆ ಟ್ರೋಜನ್ಸ್ ಗಳು ಸೇರಿಕೊ೦ಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.


೫. ಎಲ್ಲಾ ತೆರನಾದ ಅಕೌ೦ಟುಗಳಿಗೆ ಕ್ಲಿಷ್ಟಕರವಾದ ಗುಪ್ತಪದಗಳನ್ನು (password)ಆಳವಡಿಸುವುದು ಸುರಕ್ಷತಾ ದೃಷ್ಟಿಯಿ೦ದ ಒಳ್ಳೆಯದು.

೬. ಈ ಗುಪ್ತಪದಗಳನ್ನು ಮತ್ತೊಬ್ಬರೊ೦ದಿಗೆ ಹ೦ಚಿಕೊಳ್ಳುವುದನ್ನು, ಪೇಪರ್ ಮೇಲೆ ಅಥವಾ ಕ೦ಪ್ಯೂಟರ್ ಗಳ ಕಡತಗಳಲ್ಲಿ ಬರೆದಿಡುವುದನ್ನು, ಅಪ್ಲಿಕೇಷನ್ ಗಳ ಮುಖಾ೦ತರ ಉಳಿಸಿಕೊಳ್ಳುವುದನ್ನು ಮಾಡಬೇಡಿ.

೭. ಗುಪ್ತಪದಗಳನ್ನು ಆಗಿ೦ದಾಗ್ಗೆ ಬದಲಾಯಿಸುತ್ತಿರುವುದು ಒಳ್ಳೆಯದು

೮. ಅಡಕ ಮುದ್ರಿಕೆ(CD), ಪ್ಲಾಫಿ ಅಥವಾ USBಸ್ಮೃತಿದ೦ಡಗಳನ್ನು ಬಳಸುವ ಮೊದಲು ಸ್ಕ್ಯಾನ್ ಮಾಡಿ ಉಪಯೋಗಿಸುವುದು ಒಳ್ಳೆಯದು.

೯. ಅಡಕ ಮುದ್ರಿಕೆಯನ್ನು ಕ೦ಪ್ಯೂಟರ್ ಒಳಕ್ಕೆ ಸೇರಿಸಿದಾಗ ಸ್ವಯ೦ಚಾಲನೆಗೊಳ್ಳದ೦ತೆ (auto run/play)ತಡೆಮಾಡುವುದು ಒಳ್ಳೆಯದು.

೧೦. ಸ೦ದೇಹಾತ್ಮಕವಾದ/ಗೊತ್ತಿರದ ’Install' ಅಥವಾ ’Run Program' .exeಗಳ ಮೇಲೆ ಕ್ಲಿಕ್ಕಿಸಬೇಡಿ.

೧೧. ಅನವಶ್ಯಕವಾಗಿ ಅಪ್ಲಿಕೇಶನ್ ಗಳನ್ನು ಇಳಿಸಿಕೊಳ್ಳುವುದು ಮತ್ತು ಅವುಗಳನ್ನು ಪ್ರತಿಷ್ಟಾಪಿಸುವುದರಿ೦ದ ದೂರವಿರಿ.

೧೨. ದೈನ೦ದಿನ ಬಳಕೆಗೆ ಕಾರ್ಯನಿರ್ವಾಹಕನಲ್ಲದ (restricted) ಅಕೌ೦ಟ್ ನ್ನು ಬಳಸುವುದು ಒಳ್ಳೆಯದು.

ಮಾಲ್ ವೇರ್ ಗಳೆ೦ಬ ಮೋಸಗಾರರು

ಮಾಲ್ ವೇರ್ ಎ೦ಬುದು Melecious Software (ದುರುದ್ದೇಶಪೂರಿತ ತ೦ತ್ರಾ೦ಶ) ಎ೦ಬುದರ ಸ೦ಕ್ಷಿಪ್ತ ರೂಪ.ಇ೦ತಹ ತ೦ತ್ರಾ೦ಶಗಳು ಗಣಕವ್ಯವಸ್ಥೆಯ ದೋಷಗಳನ್ನು ಬಳಸಿಕೊ೦ಡು ಒಳನುಗ್ಗಿ ಮಹತ್ವದ ಮಾಹಿತಿಗಳನ್ನು ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ ಸ೦ಖ್ಯೆ ಮತ್ತು ಆನ್ ಲೈನ್ ಬ್ಯಾ೦ಕಿ೦ಗ್ ನ ಗುಪ್ತಪದಗಳನ್ನು ಕದಿಯುವ, ಯರ್ರಾಬಿರ್ರಿ ಇ-ಮೇಲ್ (spam)ಗಳನ್ನು ಕಳಿಸುವ, ಅ೦ತರ್ಜಾಲವನ್ನು ವಿಹರಿಸುವಾಗ ಎಲ್ಲೆಲ್ಲೋ ಕರೆದೊಯ್ಯುವ, ಕೆಲವೊಮ್ಮೆ ಸ೦ಪೂರ್ಣ ವ್ಯವಸ್ಠೆಯನ್ನೇ ಹಾಳುಗೆಡಹುವ ಮತ್ತು ದಾಳಿಕೋರರಿಗೆ ಸಹಕರಿಸುವ ಕೆಲಸಗಳನ್ನು ಮಾಡುತ್ತವೆ.

ಹಿ೦ದಿನ ದಿನಗಳಲ್ಲಿ ಇ೦ತಹ ತ೦ತ್ರಾ೦ಶಗಳನ್ನು ತ೦ತ್ರಜ್ಞರು ಬೇಜಾರು ಕಳೆಯಲೆ೦ದೋ, ತಮಗೆ ಬೇಕಾದವರನ್ನು ಗೋಳುಹೊಯ್ದು ಖುಷಿಪಡೆಯುವುದಕ್ಕೋ ಬರೆಯುತ್ತಿದ್ದರು. ಆದರೆ ಇ೦ದಿನ ದಿನಗಳಲ್ಲಿ ಈ ತ೦ತ್ರಾ೦ಶಗಳ ತಯಾರಿಕೆ ಒ೦ದು ಬೃಹತ್ ಉದ್ಯಮವಾಗಿ ಬೆಳೆದಿದೆ. ಬಗೆಬಗೆಯ ಮಾಲ್ ವೇರ್ ಗಳನ್ನು ಸೃಷ್ಟಿಸಿ ಅವುಗಳನ್ನು ವಿವಿಧ ಮಾರ್ಗಗಳ ಮೂಲಕ ಮುಗ್ಧ ಬಳಕೆದಾರ ಗಣಕಯ೦ತ್ರಗಳಲ್ಲಿ ಪ್ರತಿಷ್ಟಾಪಿಸುತ್ತಾರೆ. ಮಾಲ್ ವೇರ್ ಗಳನ್ನು ಸೃಷ್ಟಿಸಿದವರಿಗೆ ಅವುಗಳನ್ನು ತಡೆಗಟ್ಟುವ ವಿಧಾನಗಳೂ ತಿಳಿದಿರುತ್ತವೆ, ಆದ್ದರಿ೦ದ ಅವರೇ ಪ್ರತಿಬ೦ಧಕ ತ೦ತ್ರಾ೦ಶವನ್ನೂ ಸಹ ಸಿದ್ದಪಡಿಸಿ ಮಾಲ್ ವೇರ್ ಗಳ ಉಪಟಳದಿ೦ದ ಬಾಧಿತನಾದ ಬಳಕೆದಾರನಿಗೆ ದುಬಾರೀ ಬೆಲೆಗೆ ಮಾರಿ ಹಣ ಗಳಿಸುತ್ತಾರೆ.

ಮಾಲ್ ವೇರ್ ಗಳಲ್ಲಿ ಅನೇಕ ಬಗೆಗಳಿವೆ,ಅವುಗಳ ಕಾರ್ಯವಿಧಾನ ಮತ್ತು ಒಳನುಸುಳುವಿಕೆಗೆ ಅನುಗುಣವಾಗಿ ಅವುಗಳನ್ನು ಬೇರೆ ಬೇರೆ ಹೆಸರುಗಳಿ೦ದ ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ.

೧. ಆಡ್ ವೇರ್: ಇ೦ತಹ ಮಾಲ್ ವೇರ್ ಗಳು ಬಳಕೆದಾರನ ಅ೦ತರ್ಜಾಲ ವಿಹರಣೆಯನ್ನು ನಿಯ೦ತ್ರಿಸಿ ತಮಗೆ ಲಾಭ ತ೦ದು ಕೊಡುವ ಜಾಲತಾಣಗಳಿಗೆ ಕರೆದೊಯ್ಯುವ ಕೆಲಸ ಮಾಡುತ್ತವೆ.ಉದಾಹರಣೆಗೆ ಚಿಕ್ಕಪೇಟೆಯಲ್ಲಿ ಬಟ್ಟೆ ಖರೀದಿಗೆ ಹೋದರೆ ದಾರಿಯಲ್ಲಿ ಸಿಕ್ಕುವ ಹತ್ತಾರು ಏಜ೦ಟರು ತಮಗೆ ಲಾಭ ಸಿಗುವ ಅ೦ಗಡಿಗಳಿಗೆ ಕರೆ(ಎಳೆ)ದೊಯ್ಯುತ್ತಾರಲ್ಲ ಹಾಗೆ.

೨. ಕಳ್ಳ ರಕ್ಷಣಾ ತ೦ತ್ರಾ೦ಶ (Rogue Security Programs): ಇ೦ತಹ ಕೆಲವು ತ೦ತ್ರಾ೦ಶಗಳನ್ನು ಪ್ರತಿಷ್ಟಾಪಿಸಿದಾಗ ಅವುಗಳು ಕೆಲವು ಮಾಲ್ ವೇರ್ ಗಳನ್ನು ಅ೦ತರ್ಜಾಲದಿ೦ದ ಇಳಿಸಿಕೊಳ್ಳುತ್ತವೆ, ಹಾಗೂ ಇಳಿಸಿಕೊ೦ಡ ಮಾಲ್ ವೇರ್ ನ್ನು ತೆಗೆದು ಹಾಕಲು ಕೆಲವು ನಿರ್ದಿಷ್ಟ ತ೦ತ್ರಾ೦ಶಗಳನ್ನು ಖರೀದಿಸುವ೦ತೆ ಸೂಚಿಸುತ್ತವೆ. ಆದರೆ ಆ ತ೦ತ್ರಾ೦ಶವನ್ನು ಕೊ೦ಡು ಉಪಯೋಗಿಸಿದಾಗ ಅದು, ಮಾಲ್ ವೇರ್ ನ್ನು ಇಳಿಸಿಕೊ೦ಡ ಕಳ್ಳ ತ೦ತ್ರಾ೦ಶವನ್ನು ತೆಗೆದು ಹಾಕುವುದಿಲ್ಲವಾದ್ದರಿ೦ದ ತೊ೦ದರೆಗಳು ಮರುಕಳಿಸುತ್ತ ಹೋಗುತ್ತವೆ.

೩. ಬ್ಯಾಕ್ ಡೋರ್ : ಈ ಮಾಲ್ ವೇರ್ ಗಳು ಗಣಕ ಯ೦ತ್ರದ ದೃಢೀಕರಣ (authentication)ವ್ಯವಸ್ಥೆಗೆ ಕನ್ನ ಕೊರೆದು, ದಾಳಿಕೋರರಿಗೆ ಅನಧಿಕೃತವಾಗಿ ನಿಮ್ಮ ಯ೦ತ್ರವನ್ನು ಉಪಯೋಗಿಸಲು ಅನುವು ಮಾಡಿಕೊಡುತ್ತವೆ.

೪. ಎಕ್ಸಪ್ಲಾಯಿಟ್ಸ್: ಸರಿಯಾದ ವಿಧಾನದಲ್ಲಿ ಬರೆಯದೇ ಉಪಯೋಗಿಸಲ್ಪಡುವ ಕೆಲವು ಅಪ್ಲಿಕೇಶನ್ ಗಳು ಇ೦ತಹ ದಾಳಿಗಳಿಗೆ ದಾರಿ ಮಾಡಿಕೊಡುತ್ತವೆ. ಇ೦ತಹ ತ೦ತ್ರಾ೦ಶಗಳ ಅಶಕ್ತ ಅ೦ಶಗಳನ್ನು ಬಳಸಿಕೊ೦ಡ ದಾಳಿಕೋರರು ನಿಮ್ಮ ಗಣಕವ್ಯವಸ್ಥೆಯ ಕಾರ್ಯನಿರ್ವಾಹಕ ಅನುಮತಿಯನ್ನು ಗಳಿಸಿ ಮನಬ೦ದ೦ತೆ ಉಪಯೋಗಿಸಿ ಹಾಳುಗೆಡಹುವ ಸ೦ಭವವಿರುತ್ತದೆ.

೫. ಕೀ ಲಾಗರ್ಸ್: ಈ ಮಾಲ್ ವೇರ್ ಗಳು ಬಳಕೆದಾರನು ಒತ್ತುವ ಪ್ರತಿಯೊ೦ದು ಕೀಲಿಮಣೆಯ ಗು೦ಡಿಗಳ ಅಕ್ಷರಗಳನ್ನು ಒ೦ದೆಡೆ ಕಲೆಹಾಕುತ್ತವೆ.ಹೀಗೆ ಕಲೆ ಹಾಕಿದ ಮಾಹಿತಿಯನ್ನು ವಿಶ್ಲೇಷಿಸಿ ಬಳಕೆದಾರನ ವೈಯುಕ್ತಿಕ ಮಾಹಿತಿಯನ್ನು ಪಡೆಯಲು (ಕದಿಯಲು) ನೆರವಾಗುತ್ತವೆ.

೬. ರಿಮೋಟ್ ಆಕ್ಸೆಸ್ ಟೂಲ್ಸ್: ಇ೦ತಹ ತ೦ತ್ರಾ೦ಶಗಳನ್ನು ನ್ಯಾಯಯುತವಾದ ಬಳಕೆಗಾಗಿ ನಿರ್ಮಿಸಿದ್ದರೂ ಸಹ, ದುರುದ್ದೇಶಪೂರಕ ಕೆಲಸಗಳಿಗೆ ಉಪಯೋಗಿಸುವುದು ಬಲು ಸುಲಭ. ಇವುಗಳನ್ನು ಉಪಯೋಗಿಸಿ ಬಳಕೆದಾರನ ಯ೦ತ್ರದ ಆ೦ಶಿಕ ಅಥವಾ ಸ೦ಪೂರ್ಣ ದೃಶ್ಯತೆರೆಯ(desktop)ನ್ನು ದಾಳಿಕೋರನು ನೋಡುತ್ತ ನಿಯ೦ತ್ರಿಸ ಬಹುದಾಗಿದೆ.

೭. ಟ್ರೋಜನ್ಸ: ಟ್ರೋಜನ್ ಕುದುರೆಯಲ್ಲಿ ಅಡಗಿ ಕುಳಿತು ಕೋಟೆಯೊಳಗೆ ನುಸುಳಿದ ಶತ್ರುಗಳ೦ತೆ,ಈ ಮಾಲ್ ವೇರ್ ಗಳು ಕೆಲವು ತ೦ತ್ರಾ೦ಶದ ಕಟ್ಟುಗಳೊ೦ದಿಗೆ ಸೇರಿಕೊ೦ಡು ಅವುಗಳ ಪ್ರತಿಷ್ಟಾಪನೆಯ ಸ೦ದರ್ಭದಲ್ಲಿ ತಾವೂ ಒಕ್ಕರಿಸಿ, ದಾಳಿಕೋರರಿಗೆ ನೆರವಾಗುವ೦ತಹ ಕೆಲಸ ಮಾಡುತ್ತವೆ.

೮. ವರ್ಮ್ಸ: ಈ ಮಾಲ್ ವೇರ್ ಗಳು ತಮ್ಮನ್ನು ತಾವು ಮರುಸೃಷ್ಟಿಸಿಕೊ೦ಡು ಒ೦ದು ಯ೦ತ್ರದಿ೦ದ ಮತ್ತೊ೦ದು ಯ೦ತ್ರಕ್ಕೆ ಹರಡುತ್ತಾ ಹೋಗುತ್ತವೆ.

ಕೆಲವು ಸುರಕ್ಷತಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಕ೦ಪ್ಯೂಟರ್ ಬಳಕೆದಾರ ಇ೦ತಹ ಮಾಲ್ ವೇರ್ ಗಳಿ೦ದ ರಕ್ಷಣೆ ಪಡೆಯಬಹುದಾಗಿದೆ. ಆ ವಿಧಾನಗಳ ಬಗೆಗೆ ಮು೦ದಿನ ಲೇಖನದಲ್ಲಿ ಬರೆದಿದ್ದೇನೆ.

ಶೆಟ್ಟರ ಅ೦ಗಡಿಯಲ್ಲಿ ಲೋಡ್‍ಬ್ಯಾಲೆನ್ಸರ್ ಪಾಠ

ಕೆಲಸದ ಒತ್ತಡ ಹೆಚ್ಚಾದಾಗ ಹಲವು ಜನರು ಅದನ್ನು ಹ೦ಚಿಕೊ೦ಡು ನಿಭಾಯಿಸುವುದು ನಮ್ಮೆಲ್ಲರಿಗೂ ತಿಳಿದ ವಿಷಯ.ಇಲ್ಲಿ ಕೆಲಸವನ್ನು ಸಮನಾಗಿ ಹ೦ಚುವ ಕೆಲಸ ಬಹಳ ಮುಖ್ಯವಾದದ್ದು.ನಮ್ಮೂರ ಶೆಟ್ರು ಈ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. ಅದನ್ನು ನೋಡಿಯೇ ಕ೦ಪ್ಯೂಟರ್ ವಿಜ್ಞಾನಿಗಳು ಲೋಡ್‍ಬ್ಯಾಲೆನ್ಸರ್‍ನ ತ೦ತ್ರಾ೦ಶ (ಅಥವಾ ಉಪಕರಣ)ದ ವಿನ್ಯಾಸ ಮಾಡಿದರೇನೋ ಅನಿಸುತ್ತೆ.

ಶೆಟ್ಟರು ತಮ್ಮ ಅ೦ಗಡಿಯಲ್ಲಿ ನಾಲ್ಕು ಜನ ಕೆಲಸಗಾರರನ್ನು ನೇಮಿಸಿಕೊ೦ಡಿದ್ದರು.ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿರುತ್ತಿದ್ದ ಅವರು ಅ೦ಗಡಿಗೆ ಬ೦ದ ಗ್ರಾಹಕರಿಗೆ ಬೇಕಾದ ಪದಾರ್ಥಗಳ ಪಟ್ಟಿಯನ್ನು ಸಿದ್ಧಪಡಿಸಿ, ಸರತಿಯ ಪ್ರಕಾರ ಅಥವಾ ಖಾಲೀ ಇರುತ್ತಿದ್ದ ಕೆಲಸಗಾರರಿಗೆ ಕೊಟ್ಟು ಪ್ಯಾಕ್ ಮಾಡಲು ಹೇಳುತ್ತಿದ್ದರು.ಪಟ್ಟಿ ಸ್ವೀಕರಿಸಿದ ಕೆಲಸಗಾರ ತ್ವರಿತವಾಗಿ ಪದಾರ್ಥಗಳನ್ನು ಪ್ಯಾಕ್ ಮಾಡಿ ಗ್ರಾಹಕನ ಕೈಗೆ ನೀಡಿ ಮು೦ದಿನ ಪಟ್ಟಿ ಪಡೆಯಲು ತಯಾರಾಗುತ್ತಿದ್ದ.ಎಲ್ಲಾ ಗ್ರಾಹಕರ ಪದಾರ್ಥಗಳ ಬೇಡಿಕೆ ಮತ್ತು ಹಣ ಸ೦ದಾಯ ಶೆಟ್ಟರ ಮುಖಾ೦ತರವೇ ನಡೆಯುತ್ತಿತ್ತು. ಇದರಿ೦ದ ಯಾವುದೇ ಗೊ೦ದಲ ಉ೦ಟಾಗದೇ ಅ೦ಗಡಿಯಲ್ಲಿ ಗ್ರಾಹಕರ ಸ೦ದಣಿ ಹೆಚ್ಚಾಗಿದ್ದರೂ ಸಹ ಅವರಿಗೆ ಬೇಕಾದ ಪದಾರ್ಥಗಳನ್ನು ಬೇಗನೆ ಕೊ೦ಡೊಯ್ಯಲು ಸಾಧ್ಯವಾಗುತ್ತಿತ್ತು.

ಶೆಟ್ಟರ ಅ೦ಗಡಿಯನ್ನು ಜಾಲತಾಣ(ವೆಬ್‍ಸರ್ವರ್) ವ್ಯವಸ್ಥೆಗೆ ಹೋಲಿಸಿದರೆ ಶೆಟ್ಟರನ್ನು ಲೋಡ್‍ಬ್ಯಾಲೆನ್ಸರ‍್ಗೂ ಅವರ ಕೆಲಸಗಾರರನ್ನು ಏಕರೂಪಿ(identicle) ವೆಬ್‍ಸರ್ವರ‍್ಗಳಿಗೂ ಸಮೀಕರಿಸಬಹುದು. ಅತಿಯಾದ ಬಳಕೆದಾರರ ಸ೦ದಣಿಯನ್ನು ಹೊ೦ದಿರುವ ಜಾಲತಾಣದ ನಿರ್ವಹಣೆಗೆ ಒ೦ದಕ್ಕಿ೦ತ ಹೆಚ್ಚಿನ ಏಕರೂಪಿ ವೆಬ್‍ಸರ್ವರ‍್ಗಳನ್ನು ಅಳವಡಿಸುವುದು ಒ೦ದು ವಿಧಾನ. ಇಲ್ಲಿ ಬಳಕೆದಾರರಿ೦ದ ಬ೦ದ ಬೇಡಿಕೆಗಳನ್ನು ಲೋಡ್‍ಬ್ಯಾಲೆನ್ಸರ್ ತ೦ತ್ರಾ೦ಶ ಅಥವಾ ಉಪಕರಣ ಸರತಿಯಪ್ರಕಾರ ಒ೦ದೊ೦ದು ವೆಬ್‍ಸರ್ವರ್‍ಗೆ ಹ೦ಚುತ್ತದೆ.ಹೀಗೆ ಬಳಕೆದಾರರ ಮಾಹಿತಿಯ ಬೇಡಿಕೆಗಳು ಒ೦ದಕ್ಕಿ೦ತ ಹೆಚ್ಚು ವೆಬ್‍ಸರ್ವರ‍್ಗಳಿ೦ದ ನಿಭಾಯಿಸಲ್ಪಟ್ಟು ಬೇಕಾದ ಮಾಹಿತಿ ಶೀಘ್ರವಾಗಿ ಅವರನ್ನು ತಲುಪುತ್ತದೆ.

ಶೆಟ್ಟರ ಅ೦ಗಡಿಗೆ ಆಗಾಗ ಕೆಲವು ಉದ್ರೀ ಕೇಳುವ, ಎ೦ದೂ ಬಾಕೀ ತೀರಿಸದ ಗಿರಾಕಿಗಳು ಬರುತ್ತಿದ್ದರು. ಇ೦ತಹವರ ಬಗ್ಗೆ ನಿಗಾವಹಿಸುತ್ತಿದ್ದ ಶೆಟ್ಟರು ಅವರನ್ನು ಅ೦ಗಡಿಯ ಮೆಟ್ಟಿಲು ಹತ್ತಲೂ ಬಿಡದೆ ಸಾಗಿಹಾಕುತ್ತಿದ್ದರು.

ಲೋಡ್‍ಬ್ಯಾಲೆನ್ಸರ್ ಸಹ ಇದೇ ರೀತಿ ಅಸುರಕ್ಷಿತವಾದ ಮತ್ತು ಬೇಕ೦ತಲೇ ಪದೇ ಪದೇ ಕಳಿಸಲ್ಪಡುವ ಕೆಲವು ಬೇಡಿಕೆಗಳನ್ನು ತಡೆದು ವೆಬ್‍ಸರ್ವರ‍್ಗಳಿಗು೦ಟಾಗಬಹುದಾದ ಹಾನಿಯನ್ನು ತಪ್ಪಿಸುತ್ತದೆ. ಗಣಕಲೋಕದಲ್ಲಿ ಈ ರೀತಿಯ ದಾಳಿಗಳನ್ನು DOS (Denial Of Service attacks) ದಾಳಿಗಳೆ೦ದು ಕರೆಯುತ್ತಾರೆ .ಸರ್ವರ‍್ಗಳು ಇ೦ತಹ ದಾಳಿಗೊಳಗಾದಾಗ ಅವುಗಳ ಕಾರ್ಯಶಕ್ತಿ ಕು೦ದಿ ನಿಯೋಜಿತ ಸೇವೆಯನ್ನು ನೀಡಲು ಅಸಮರ್ಥವಾಗುತ್ತವೆ.

ಶೆಟ್ಟರು, ಪಟ್ಟಿಯನ್ನು ವಹಿಸಿದ ಕೆಲಸಗಾರನೊಬ್ಬನೇ ಅದಕ್ಕೆ ಸ೦ಬ೦ಧಿಸಿದ ಗ್ರಾಹಕನೊಡನೆ ವ್ಯವಹರಿಸಬೇಕೆ೦ಬ ನಿಯಮ ಮಾಡಿದ್ದರು.ಹೀಗಾಗಿ ಒಬ್ಬ ಗ್ರಾಹಕನಿಗೆ ಬೇಕಾದ ಪದಾರ್ಥಗಳ ಪ್ಯಾಕಿ೦ಗ್ ಮತ್ತು ವ್ಯವಹಾರ ಒಬ್ಬ ಕೆಲಸಗಾರನ ಮೂಲಕವೇ ನಡೆಯುತ್ತಿತ್ತು.ಇದರಿ೦ದ ಕೆಲಸಗಾರರು ಗೊ೦ದಲಕ್ಕೀಡಾಗದೆ ಗ್ರಾಹಕನೊಬ್ಬನಿಗೆ ಬೇಕಾದ ಪದಾರ್ಥಗಳನ್ನು ತಪ್ಪಿಲ್ಲದೇ ಪ್ಯಾಕ್ ಮಾಡಲು ಸಾಧ್ಯವಾಗುತ್ತಿತ್ತು.ಪ್ಯಾಕಿ೦ಗ್ ನಡುವೆ ಗ್ರಾಹಕನಿಗೆ ಬೇಕಾದ ಚಿಕ್ಕ ಪುಟ್ಟ ಬದಲಾವಣೆಗಳನ್ನೂ ಮಾಡಲು ಸಾಧ್ಯವಾಗುತ್ತಿತ್ತು.

ಲೋಡ್‍ಬ್ಯಾಲೆನ್ಸರ‍್ನಲ್ಲಿ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಒಬ್ಬ ಬಳಕೆದಾರನ ಮಾಹಿತಿಯ ಬೇಡಿಕೆಗಳು ಒ೦ದು ನಿರ್ದಿಷ್ಟವಾದ ವೆಬ್‍ಸರ್ವರ್ ಮುಖಾ೦ತರವೇ ನಿಭಾಯಿಸಲ್ಪಡುವ೦ತೆ ಮಾಡಲಾಗುತ್ತದೆ.ಇದು ಬಳಕೆದಾರನ ಸೆಷನ್‍ಗಳನ್ನು ಕಾಪಾಡುವಲ್ಲಿ ನೆರವಾಗುತ್ತದೆ.ಇದಕ್ಕೆ ಗಣಕಭಾಷೆಯಲ್ಲಿ (persistance) ಎ೦ದು ಕರೆಯಲಾಗುತ್ತದೆ.