Monday, September 14, 2009

ಶೆಟ್ಟರ ಅ೦ಗಡಿಯಲ್ಲಿ ಲೋಡ್‍ಬ್ಯಾಲೆನ್ಸರ್ ಪಾಠ

ಕೆಲಸದ ಒತ್ತಡ ಹೆಚ್ಚಾದಾಗ ಹಲವು ಜನರು ಅದನ್ನು ಹ೦ಚಿಕೊ೦ಡು ನಿಭಾಯಿಸುವುದು ನಮ್ಮೆಲ್ಲರಿಗೂ ತಿಳಿದ ವಿಷಯ.ಇಲ್ಲಿ ಕೆಲಸವನ್ನು ಸಮನಾಗಿ ಹ೦ಚುವ ಕೆಲಸ ಬಹಳ ಮುಖ್ಯವಾದದ್ದು.ನಮ್ಮೂರ ಶೆಟ್ರು ಈ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. ಅದನ್ನು ನೋಡಿಯೇ ಕ೦ಪ್ಯೂಟರ್ ವಿಜ್ಞಾನಿಗಳು ಲೋಡ್‍ಬ್ಯಾಲೆನ್ಸರ್‍ನ ತ೦ತ್ರಾ೦ಶ (ಅಥವಾ ಉಪಕರಣ)ದ ವಿನ್ಯಾಸ ಮಾಡಿದರೇನೋ ಅನಿಸುತ್ತೆ.

ಶೆಟ್ಟರು ತಮ್ಮ ಅ೦ಗಡಿಯಲ್ಲಿ ನಾಲ್ಕು ಜನ ಕೆಲಸಗಾರರನ್ನು ನೇಮಿಸಿಕೊ೦ಡಿದ್ದರು.ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿರುತ್ತಿದ್ದ ಅವರು ಅ೦ಗಡಿಗೆ ಬ೦ದ ಗ್ರಾಹಕರಿಗೆ ಬೇಕಾದ ಪದಾರ್ಥಗಳ ಪಟ್ಟಿಯನ್ನು ಸಿದ್ಧಪಡಿಸಿ, ಸರತಿಯ ಪ್ರಕಾರ ಅಥವಾ ಖಾಲೀ ಇರುತ್ತಿದ್ದ ಕೆಲಸಗಾರರಿಗೆ ಕೊಟ್ಟು ಪ್ಯಾಕ್ ಮಾಡಲು ಹೇಳುತ್ತಿದ್ದರು.ಪಟ್ಟಿ ಸ್ವೀಕರಿಸಿದ ಕೆಲಸಗಾರ ತ್ವರಿತವಾಗಿ ಪದಾರ್ಥಗಳನ್ನು ಪ್ಯಾಕ್ ಮಾಡಿ ಗ್ರಾಹಕನ ಕೈಗೆ ನೀಡಿ ಮು೦ದಿನ ಪಟ್ಟಿ ಪಡೆಯಲು ತಯಾರಾಗುತ್ತಿದ್ದ.ಎಲ್ಲಾ ಗ್ರಾಹಕರ ಪದಾರ್ಥಗಳ ಬೇಡಿಕೆ ಮತ್ತು ಹಣ ಸ೦ದಾಯ ಶೆಟ್ಟರ ಮುಖಾ೦ತರವೇ ನಡೆಯುತ್ತಿತ್ತು. ಇದರಿ೦ದ ಯಾವುದೇ ಗೊ೦ದಲ ಉ೦ಟಾಗದೇ ಅ೦ಗಡಿಯಲ್ಲಿ ಗ್ರಾಹಕರ ಸ೦ದಣಿ ಹೆಚ್ಚಾಗಿದ್ದರೂ ಸಹ ಅವರಿಗೆ ಬೇಕಾದ ಪದಾರ್ಥಗಳನ್ನು ಬೇಗನೆ ಕೊ೦ಡೊಯ್ಯಲು ಸಾಧ್ಯವಾಗುತ್ತಿತ್ತು.

ಶೆಟ್ಟರ ಅ೦ಗಡಿಯನ್ನು ಜಾಲತಾಣ(ವೆಬ್‍ಸರ್ವರ್) ವ್ಯವಸ್ಥೆಗೆ ಹೋಲಿಸಿದರೆ ಶೆಟ್ಟರನ್ನು ಲೋಡ್‍ಬ್ಯಾಲೆನ್ಸರ‍್ಗೂ ಅವರ ಕೆಲಸಗಾರರನ್ನು ಏಕರೂಪಿ(identicle) ವೆಬ್‍ಸರ್ವರ‍್ಗಳಿಗೂ ಸಮೀಕರಿಸಬಹುದು. ಅತಿಯಾದ ಬಳಕೆದಾರರ ಸ೦ದಣಿಯನ್ನು ಹೊ೦ದಿರುವ ಜಾಲತಾಣದ ನಿರ್ವಹಣೆಗೆ ಒ೦ದಕ್ಕಿ೦ತ ಹೆಚ್ಚಿನ ಏಕರೂಪಿ ವೆಬ್‍ಸರ್ವರ‍್ಗಳನ್ನು ಅಳವಡಿಸುವುದು ಒ೦ದು ವಿಧಾನ. ಇಲ್ಲಿ ಬಳಕೆದಾರರಿ೦ದ ಬ೦ದ ಬೇಡಿಕೆಗಳನ್ನು ಲೋಡ್‍ಬ್ಯಾಲೆನ್ಸರ್ ತ೦ತ್ರಾ೦ಶ ಅಥವಾ ಉಪಕರಣ ಸರತಿಯಪ್ರಕಾರ ಒ೦ದೊ೦ದು ವೆಬ್‍ಸರ್ವರ್‍ಗೆ ಹ೦ಚುತ್ತದೆ.ಹೀಗೆ ಬಳಕೆದಾರರ ಮಾಹಿತಿಯ ಬೇಡಿಕೆಗಳು ಒ೦ದಕ್ಕಿ೦ತ ಹೆಚ್ಚು ವೆಬ್‍ಸರ್ವರ‍್ಗಳಿ೦ದ ನಿಭಾಯಿಸಲ್ಪಟ್ಟು ಬೇಕಾದ ಮಾಹಿತಿ ಶೀಘ್ರವಾಗಿ ಅವರನ್ನು ತಲುಪುತ್ತದೆ.

ಶೆಟ್ಟರ ಅ೦ಗಡಿಗೆ ಆಗಾಗ ಕೆಲವು ಉದ್ರೀ ಕೇಳುವ, ಎ೦ದೂ ಬಾಕೀ ತೀರಿಸದ ಗಿರಾಕಿಗಳು ಬರುತ್ತಿದ್ದರು. ಇ೦ತಹವರ ಬಗ್ಗೆ ನಿಗಾವಹಿಸುತ್ತಿದ್ದ ಶೆಟ್ಟರು ಅವರನ್ನು ಅ೦ಗಡಿಯ ಮೆಟ್ಟಿಲು ಹತ್ತಲೂ ಬಿಡದೆ ಸಾಗಿಹಾಕುತ್ತಿದ್ದರು.

ಲೋಡ್‍ಬ್ಯಾಲೆನ್ಸರ್ ಸಹ ಇದೇ ರೀತಿ ಅಸುರಕ್ಷಿತವಾದ ಮತ್ತು ಬೇಕ೦ತಲೇ ಪದೇ ಪದೇ ಕಳಿಸಲ್ಪಡುವ ಕೆಲವು ಬೇಡಿಕೆಗಳನ್ನು ತಡೆದು ವೆಬ್‍ಸರ್ವರ‍್ಗಳಿಗು೦ಟಾಗಬಹುದಾದ ಹಾನಿಯನ್ನು ತಪ್ಪಿಸುತ್ತದೆ. ಗಣಕಲೋಕದಲ್ಲಿ ಈ ರೀತಿಯ ದಾಳಿಗಳನ್ನು DOS (Denial Of Service attacks) ದಾಳಿಗಳೆ೦ದು ಕರೆಯುತ್ತಾರೆ .ಸರ್ವರ‍್ಗಳು ಇ೦ತಹ ದಾಳಿಗೊಳಗಾದಾಗ ಅವುಗಳ ಕಾರ್ಯಶಕ್ತಿ ಕು೦ದಿ ನಿಯೋಜಿತ ಸೇವೆಯನ್ನು ನೀಡಲು ಅಸಮರ್ಥವಾಗುತ್ತವೆ.

ಶೆಟ್ಟರು, ಪಟ್ಟಿಯನ್ನು ವಹಿಸಿದ ಕೆಲಸಗಾರನೊಬ್ಬನೇ ಅದಕ್ಕೆ ಸ೦ಬ೦ಧಿಸಿದ ಗ್ರಾಹಕನೊಡನೆ ವ್ಯವಹರಿಸಬೇಕೆ೦ಬ ನಿಯಮ ಮಾಡಿದ್ದರು.ಹೀಗಾಗಿ ಒಬ್ಬ ಗ್ರಾಹಕನಿಗೆ ಬೇಕಾದ ಪದಾರ್ಥಗಳ ಪ್ಯಾಕಿ೦ಗ್ ಮತ್ತು ವ್ಯವಹಾರ ಒಬ್ಬ ಕೆಲಸಗಾರನ ಮೂಲಕವೇ ನಡೆಯುತ್ತಿತ್ತು.ಇದರಿ೦ದ ಕೆಲಸಗಾರರು ಗೊ೦ದಲಕ್ಕೀಡಾಗದೆ ಗ್ರಾಹಕನೊಬ್ಬನಿಗೆ ಬೇಕಾದ ಪದಾರ್ಥಗಳನ್ನು ತಪ್ಪಿಲ್ಲದೇ ಪ್ಯಾಕ್ ಮಾಡಲು ಸಾಧ್ಯವಾಗುತ್ತಿತ್ತು.ಪ್ಯಾಕಿ೦ಗ್ ನಡುವೆ ಗ್ರಾಹಕನಿಗೆ ಬೇಕಾದ ಚಿಕ್ಕ ಪುಟ್ಟ ಬದಲಾವಣೆಗಳನ್ನೂ ಮಾಡಲು ಸಾಧ್ಯವಾಗುತ್ತಿತ್ತು.

ಲೋಡ್‍ಬ್ಯಾಲೆನ್ಸರ‍್ನಲ್ಲಿ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಒಬ್ಬ ಬಳಕೆದಾರನ ಮಾಹಿತಿಯ ಬೇಡಿಕೆಗಳು ಒ೦ದು ನಿರ್ದಿಷ್ಟವಾದ ವೆಬ್‍ಸರ್ವರ್ ಮುಖಾ೦ತರವೇ ನಿಭಾಯಿಸಲ್ಪಡುವ೦ತೆ ಮಾಡಲಾಗುತ್ತದೆ.ಇದು ಬಳಕೆದಾರನ ಸೆಷನ್‍ಗಳನ್ನು ಕಾಪಾಡುವಲ್ಲಿ ನೆರವಾಗುತ್ತದೆ.ಇದಕ್ಕೆ ಗಣಕಭಾಷೆಯಲ್ಲಿ (persistance) ಎ೦ದು ಕರೆಯಲಾಗುತ್ತದೆ.

1 comment:

Ambuja (Usha Atte) said...

Nanu ellavannu odide..tumba chennagi anstu...yella barahagalu tumba tamasheindda kudive. beluru halebidina shilabalikeyara p photos channave. nimma mundina payana yaanakke sagali. bandamele nimma abhipraya tilisidare oll eyedu.

Post a Comment