Sunday, May 31, 2020

ಮಹಾಭಾರತ

--------- ಭಾಗ 1---------

ಪ್ರತಿಜ್ಞೆಯ ಮಾಡಿದನು ಭೀಷ್ಮನು
ಸಂಸಾರವನ್ನೆಂದಿಗೂ ಹೂಡೆನು
ಸಿಂಹಾಸನವನ್ನೆಂದಿಗೂ ಏರೆನು
ನಾನೆಂದೂ ಹಸ್ತಿನಾಪುರದರಸರ ದಾಸನು
ಹೀಗೆಂದು ಸತ್ಯವತಿಯನು ಓಲೈಸಿದನು
ತಂದೆಯ ಜೊತೆ ಅವಳ ಲಗ್ನವ ಮಾಡಿದನು

ಶಂತನು ಸತ್ಯವತಿಯರಿಗಾಯಿತು ಪುತ್ರ ಸಂತಾನ
ಹಿರಿಮಗ ಚಿತ್ರಾಂಗದ ಮಡಿದನು ಮಾಡುತ ಕದನ
ಕಿರಿಮಗ ವಿಚಿತ್ರವೀರ್ಯ ಅಲಂಕರಿಸಿದನು ಸಿಂಹಾಸನ
ಕಾಶೀಕುವರಿಯರ ಜೊತೆ ಆಯಿತವನ ಲಗ್ನ
ಸಂತಾನವಿಲ್ಲದೇ ಹೊಂದಿದನು ಅವನು ಅಕಾಲ ಮರಣ
ಬರಿದಾಯಿತು ಉತ್ತರಾಧಿಕಾರಿಯಿಲ್ಲದೆ ಸಿಂಹಾಸನ

ಸತ್ಯವತಿಗೆ ಕಾಡಿತು ಹಸ್ತಿನಾಪುರದ ಉತ್ತರಾಧಿಕಾರಿಯ ಚಿಂತೆ
ಆದೇಶ ಕೊಟ್ಟಳು ಮಗ ವ್ಯಾಸರಿಗೆ ನಿಯೋಗ ಮಾಡುವಂತೆ
ಋಷಿಯ ರೂಪವ ಕಂಡು ಕಣ್ಣು ಮುಚ್ಚಿ ನಿಂತಳು ಅಂಬಿಕೆ
ಕುರುಡು ಮಗ ಧೃತರಾಷ್ಟ್ರನ ಹೆತ್ತಳು ಆಕೆ
ಋಷಿಯ ರೂಪವ ಕಂಡು ಬಿಳಿಚಿದಳು ಅಂಬಾಲಿಕೆ
ಬಿಳಿಚಿಕೊಂಡವನಂತಿದ್ದ ಪಾಂಡುವನ್ನು ಪಡೆದಳಾಕೆ

ಮತ್ತೊಮ್ಮೆ ಋಷಿಯೆಡೆಗೆ ತೆರಳಲು ಹೆದರಿದಳು ಅಂಬಿಕೆ
ಕಳಿಸಿದಳು ತನ್ನ ದಾಸಿಯನು ವ್ಯಾಸರೊಡನೆ ನಿಯೋಗಕೆ
ಋಷಿಯ ರೂಪವ ಕಡೆಗಣಿಸಿ ಸಹಜವಾಗಿದ್ದಳು ದಾಸಿ  
ಆರೋಗ್ಯವಂತ ಬುದ್ಧಿಮತಿಯಾದ ವಿದುರನ ಪಡೆದಳಾಕೆ
ಭೀಷ್ಮನು  ಆಸರೆಯಾಗಿ ನಿಂತನು ಸಿಂಹಾಸನಕೆ
ಧೃತರಾಷ್ಟ್ರ ಪಾಂಡು ವಿದುರರು ಬಂದರು ಪ್ರಾಯಕೆ

No comments:

Post a Comment