Sunday, May 3, 2020

ಸಂಕ್ಷಿಪ್ತ ರಾಮಾಯಣ

ದಶರಥನು ಕತ್ತಲಿನಲಿ ಹೂಡಿದನು ಬಾಣ
ಕಳೆದನು ಶ್ರವಣನ ಪ್ರಾಣ
ಶ್ರವಣನ ಅಂಧ ಮಾತಾಪಿತರೂ ತೊರೆದರು ಪ್ರಾಣ
ದಶರಥನನು ಶಪಿಸಿದರು ಅವರಂತೆಯೇ ಹೊಂದಲು ಮರಣ

ದಶರಥನು ಕೈಕೇಯಿಗೆ ಕೊಟ್ಟ ವಚನದ ಕಾರಣ
ವನವಾಸಕೆ ಹೋದರು ರಾಮ ಸೀತೆ ಲಕ್ಷ್ಮಣ
ಅಲ್ಲಿ ರಾವಣನು ಮಾಡಿದನು ಸೀತಾಪಹರಣ
ರಾಮನು ಮಾಡಿದನು ಲಂಕೆಯ ಮೇಲೆ ಆಕ್ರಮಣ

ಯುದ್ಧದಲಿ ಹತರಾದರು  ಕುಂಭಕರ್ಣ ರಾವಣ
ಲಂಕಾಧಿಪತಿಯಾದನು ವಿಭೀಷಣ
ವನವಾಸವು ಆಗಿರಲು ಸಂಪೂರ್ಣ
ಅಯೋಧ್ಯೆಗೆ ಆಗಮಿಸಿದರು ರಾಮ ಸೀತೆ ಲಕ್ಷ್ಮಣ

ಆಯಿತು ರಾಮನ ಸಿಂಹಾಸನಾರೋಹಣ
ಎಲ್ಲರೂ ಹೊಗಳಿದರು ರಾಮನ ರಾಜಕಾರಣ
ಕೆಲ ಸಂಶಯಗ್ರಸ್ತ ಪ್ರಜೆಗಳು ಬಿಟ್ಟರು ಮಾತಿನ ಬಾಣ     
ಅದಾಯಿತು ಗರ್ಭವತಿ  ಸೀತಾ ಪರಿತ್ಯಾಗಕೆ ಕಾರಣ

ವಾಲ್ಮೀಕಿ ಆಶ್ರಮದಲಿ ಆಯಿತು ಲವಕುಶರ ಜನನ
ಬಾಲಕರು ಪಡೆದರು ಶಸ್ತ್ರಾಭ್ಯಾಸದ ವಿದ್ಯಾರ್ಜನ
ಕಟ್ಟಿದರವರು ರಾಮನ ಅಶ್ವಮೇಧ ಯಾಗದ ಹಯವನ್ನ
ಹಿಮ್ಮೆಟ್ಟಿಸಿದರು ಗುರುತಿಲ್ಲದ ತಮ್ಮ ಚಿಕ್ಕಪ್ಪರನ್ನ

ಗುರುಗಳು ತಪ್ಪಿಸಿದರು ರಾಮನೊಂದಿಗೆ ಬಾಲಕರ ಕದನ
ಆಜ್ಞಾಪಿಸಿದರು ಕ್ಷಮೆ ಕೇಳಿ ಹಿಂತಿರುಗಿಸಲು ಹಯವನ್ನ
ಅಯೋಧ್ಯೆಯಲಿ ಬಾಲಕರು ಹಾಡಲು ರಾಮಾಯಣದ ಕವನ
ಕಣ್ಣೀರಿಟ್ಟರು ಸೀತೆಯ ಕಥೆ ಕೇಳಿದ  ಜನ

ಬಾಲಕರೆಂದರು ಸೀತಾರಾಮರೆ ನಮ್ಮ ತಾಯಿ ತಂದೆ
ರಾಮ ಅದು ನಿಜವೆಂದು ಸೀತೆಗೆ ಶಪಥವ ಮಾಡೆಂದ ಎಲ್ಲರ ಮುಂದೆ
ಸೀತೆಯೆಂದಳು ಸಹಿಸೆನು ಇಂಥ ಅಪಮಾನವನು ಇನ್ನು ಮುಂದೆ
ಭೂತಾಯಿಯ ಮಡಿಲನು ಸೇರಿದಳು ಅವಳು ಎಲ್ಲರ ಕಣ್ಣ ಮುಂದೆ

ರಾಜಧರ್ಮವ ಪಾಲಿಸಲು ಸೀತೆಯ ಕಳೆದುಕೊಂಡನು ರಾಮ
ಕೊನೆಯಲಿ ಬಂದೊದಗಿತು ಲಕ್ಷ್ಮಣನನ್ನೂ ಪರಿತ್ಯಜಿಸ ಬೇಕಾದ ಕರ್ಮ
ಮೌಲ್ಯಗಳ ಮಹತ್ವವ ಸಾರಿದನು ಮರ್ಯಾದಾ ಪುರುಷೋತ್ತಮ
ಅವತಾರವ ಮುಗಿಸಿ ಸೇರಿದನು ಪರಂಧಾಮ

No comments:

Post a Comment