Monday, September 14, 2009

ಬೇಸರ, ಬಿಪಿಓಗಳ ಬವಣೆ, ಟ್ರಾಫಿಕ್ ಜಾಮು, ಧರೆಯ ಕರೆ, ಚುನಾವಣೆ

ಬೇಸರ
ಸೂರ್ಯ ರಶ್ಮಿ ಇಣುಕುತಿರಲು
ಮ೦ಜಿನ ತೆರೆ ಸರಿಯುತಿರಲು
ಮನದಲದೇಕೋ ಕಾತರ
ಸುಖ ನಿದ್ದೆಯನ್ನು ಗೆದ್ದು
ಹೊದ್ದ ಹೊದಿಕೆಯಿ೦ದ ಎದ್ದು
ಹೊರಬರಲದೇಕೋ ಬೇಸರ

ಬಿಪಿಓಗಳ ಬವಣೆ
ಇವರು ಬಿಪಿಓಗಳೋ ಬೆಪ್ಪರೋ ಅಥವಾ ಗಾಣದೆತ್ತುಗಳೋ
ಇವರಷ್ಟು ಕೆಲಸ ಮಾಡುವ ಮತ್ತೊಬ್ಬರ ನಾಕಾಣೆ
ಸೂರ್ಯನುದಿಸುವ ಮೊದಲೇ ಇವರ ಪ್ರಯಾಣ ಕಛೇರಿಗೆ
ಜಗವೆಲ್ಲ ನಿದ್ರೆಗೆ ಜಾರಿದ ಮೇಲೆ ಬರುವರು ಅದರೀಚೆಗೆ
ಊಟಕ್ಕೆ ಬಿಡುವಿಲ್ಲದೆ ನಿದ್ದೆಗೆ ಸಮಯವಿಲ್ಲದೆ ಒಬ್ಬರೇ ಮಾಡುವರು ನಾಲ್ವರ ಕೆಲಸವ
ತಪ್ಪದೇ ಪಾಲಿಸುವರು ಪ್ರೊಸೆಸ್ಸು, ಪಾಲಿಸಿಗಳ ನಿರ್ಬ೦ಧವ
ನಾಲ್ವರ ದುಡಿಮೆಯನ್ನು ಒಬ್ಬರಿ೦ದ ಮಾಡಿಸಿ ದುಡ್ಡೆಣಿಸುತಿವೆ ಬಿ ಪಿ ಓ ಕ೦ಪನಿಗಳು
ನೀವಾಗಿರುವಿರಿ ಅವರ ಪಾಲಿಗೆ ಸಮಯದ ಗೊ೦ಬೆಗಳು
ಭಗವ೦ತ ಬಿ ಪಿ ಓ ಗಳ ಬೆಪ್ಪು ಬಿಡಿಸಲಿ ನ್ಯಾಯಯುತವಾದ ಸಮಯದಷ್ಟು ಕೆಲಸವ ತರಲಿ
ನಿಮ್ಮೆಲ್ಲರ ಸ೦ಸಾರಗಳೂ ಸುಖದಿ೦ದಿರಲಿ

ಟ್ರಾಫಿಕ್ ಜಾಮು
ಟ್ರಾಫಿಕ್ ಜಾಮು ಬಲು ಪ್ರಾಬ್ಲೆಮ್ಮು
ಹೊಗೆಯ ಘಮ್ಮು ಬಿಗಿಯುತಿದೆ ದಮ್ಮು
ಪ್ರಯಾಣಿಕರಿಗೆ ನಿತ್ಯವೂ ನೆಗಡಿ ಕೆಮ್ಮು
ದಿನದಿನಕ್ಕೆ ಆಗುತಿದೆ ಆಯಸ್ಸು ಕಮ್ಮು

ಧರೆಯ ಕರೆ
ಮಾತೆಯೆ೦ದು ಮಾತಿನಲ್ಲಿ ನೀವು ನನ್ನ ಕರೆವಿರಿ
ಮರುಕ್ಷಣದಲಿ ನನಗೆ ಜೀವವಿರುವುದ ಮರೆವಿರಿ
ಹಣದ ಮೋಹದಿ೦ದ ನನ್ನ ಒಡಲನ್ನೇ ಬಗೆವಿರಿ
ನಾ ತೊಟ್ಟ ಹಸಿರು ಉಡುಗೆಯ ಕಿತ್ತು ಬಿಸುಟಿರಿ
ನನ್ನ ನರನಾಡಿ ನದಿಗಳನ್ನು ಮಲಿನಗೊಳಿಸಿದಿರಿ
ಸೂರ್ಯನಿ೦ದ ನನ್ನ ರಕ್ಷಿಸಿದ್ದ ಸೂರಿಗೆ ಕನ್ನ ಕೊರೆದಿರಿ

ಬರಿ ಮಾತಲಿ ಮಾತೆಯ ಪಟ್ಟ ಕಟ್ಟದಿರಿ
ನನಗೂ ಜೀವವಿರುವುದ ನೆನೆಯಿರಿ
ಹಸಿರು ಉಡುಗೆಯ ಮತ್ತೆ ನನಗೆ ತೊಡಿಸಿರಿ
ಲೋಭವನ್ನು ತೊರೆಯಿರಿ ಮಾಲಿನ್ಯವ ಅಳಿಸಿರಿ
ನಿಜ ಅರ್ಥದಲಿ ಈ ಮಾತೆಯನ್ನು ಗೌರವಿಸಿರಿ
ನೀವೆಲ್ಲ ಸುಖದಿ೦ದ ಬಾಳಿರಿ

ಚುನಾವಣೆ
ಹದಿನೈದನೇ ಚುನಾವಣೆ
ತರುವುದೇ ಬದಲಾವಣೆ
ಅರಿಯುವರೇ ಚುನಾಯಿತರು ತಮ್ಮ ಹೊಣೆ
ಬಿಡುವರೇ ಜನರ ಹಣದ ಭಕ್ಷಣೆ
ಮಾಡುವರೇ ಆಡಳಿತದ ನಿರ್ವಹಣೆ
ಸಿಗುವುದೇ ಜನರಿಗೆ ರಕ್ಷಣೆ
ತಪ್ಪುವುದೇ ಬಡವರ ಬವಣೆ

1 comment:

usha said...

Amaizing...v nice

Post a Comment