Monday, October 20, 2025

ಮಧುಗಿರಿ ಕಾಡಿನ ಚಾರಣ




ಧನತ್ರಯೋದಶಿಯಂದು ದೊರೆಯಿತು ಬಂಗಾರ
ನೋಡಲು ಮಧುಗಿರಿಯ ಕಾಡಿನ ಶೃಂಗಾರ

ಹಣತೆಯಂತೆ ಕಂಗೊಳಿಸುವ ಬೆಟ್ಟಗಳ ಸಾಲು
ಆಕಾಶದೀಪದಂತೆ ಕಾಣುವ ಚಲಿಸುವ ಮೋಡಗಳು 

ಬಗೆ ಬಗೆ ಬಣ್ಣದ ಕಾಡಿನ ಹೂಗಳು 
ಬೆಟ್ಟದ ಮೇಲಿನ ಹಸುರಿನ ಬಯಲು 

ತಣಿಸಿದವು ಮೈ ಮನಗಳ ದಣಿವು 
ಇಮ್ಮಡಿಸಿತು ದೀಪಾವಳಿಯ ಸಂಭ್ರಮವು

Sunday, October 5, 2025

ಭರಚುಕ್ಕಿ ಗಗನಚುಕ್ಕಿ

ಭರಚುಕ್ಕಿ ಗಗನಚುಕ್ಕಿ 
ಧುಮುಕುತಿರುವಿರಿ ನೀವು ಸೊಕ್ಕಿ 
ನೋಡಲು ಕಣ್ಣೆವೆ ಇಕ್ಕಿ 
ಹರಿವುದು ಆನಂದವು ಉಕ್ಕಿ

ಬಳಸಿ ನಿಮ್ಮ ಜಲಶಕ್ತಿ 
ವಿಶ್ವೇಶ್ವರಯ್ಯನವರ ಯುಕ್ತಿ 
ತಯಾರಾಯಿತು ವಿದ್ಯುಚ್ಛಕ್ತಿ
ಮೊದಲಾಯಿತು ವಿದ್ಯುತ್ ಕ್ರಾಂತಿ

Monday, July 28, 2025

ಗೀಜಗ


ಹುಲ್ಲು ಕಡ್ಡಿಗಳ ಹೆಕ್ಕಿ 
ತೆಂಗಿನ ಗರಿಗೆ ಕೊಕ್ಕನು ಹಾಕಿ 
ಹಣೆದಿಹೆ ಮನೆಯನು ಜೋತ್ಹಾಕಿ

ಗೂಡದು ನೋಡಲು ಅಚ್ಚರಿ 
ಕಾಣದು ಒಳಹೋಗುವ ದಾರಿ 
ಆದರೂ ನೀ ಅದರೊಳು ಹೋಗುವೆ ಹಾರಿ 

ನೀನೇ ಜಗದ ಮೊದಲ ನೇಕಾರ 
ನೇಯರು ಯಾರೂ ನಿನ್ನಷ್ಟು ಸುಂದರ
ಕಟ್ಟಿಕೊಡು ನಮಗೂ ಒಂದು ಸೂರ

Monday, March 10, 2025

ಸಿದ್ಧರ ಬೆಟ್ಟ

ಇದು ರಸಸಿದ್ಧರ ಗುಹೆಗಳ ಬೀಡು
ಇಲ್ಲಿದೆ ಔಷಧೀಯ ಸಸ್ಯಗಳ ಕಾಡು 
ರಸದೌತಣ ನೀಡುವ ಹಕ್ಕಿಗಳ ಹಾಡು










ಸಿದ್ದೇಶ್ವರನ ಭಕ್ತರ ಸಂಖ್ಯೆ ಅಪಾರ
ಬರಿಗಾಲಿನಲಿ ಹತ್ತಿಳಿವರು ಮೆಟ್ಟಿಲುಗಳ ನೂರಾರ
ಲೆಕ್ಕಿಸದೆ ಬಿರು ಬೇಸಿಗೆಯ ಭಾರ












ದೊಣೆಯ ಸತ್ವಯುತ ನೀರಿನ ಸ್ನಾನ
ಬೆಟ್ಟದ ಸಿದ್ದೇಶ್ವರ ಸ್ವಾಮಿಯ ದರ್ಶನ
ಕೊಡುವುದು ನಂಬಿದವರ ರೋಗಗಳಿಗೆ ಉಪಶಮನ
ಕತ್ತಲೆಯ ಗುಹೆಗಳ ತಾಣ
ನಿಷ್ಯಬ್ದವಾದ ವಾತಾವರಣ
ನೀಡುವುದು ತಪಸ್ವಿಗಳಿಗೆ ಬೇಕಾದ ಕಣ



ಇಲ್ಲಿ ಸ್ವರ್ಣಮುಖಿ ನದಿ ಉದಿಸುವುದು ಮಳೆಗಾಲಕೆ
ಬೆಟ್ಟದ ಮೇಲಿದೆ ಕುರಂಗರಾಯನ ಕೋಟೆಯ ಪಳಿಯುಳಿಕೆ
ಕಲ್ಯಾಣಿ ಹಾಗೂ ಕಲ್ಲಿನಲಿ ಕೊರೆದ ಬಾವಿ ನೀರಿನ ಸಂಗ್ರಹಕೆ
ಬೆಂಕಿ ಬೀಳದಂತೆ ಕಾಡಿನ ರಕ್ಷಣೆ
ಭಕ್ತರ ಅನುಕೂಲತೆಗಳ ಸುಧಾರಣೆ
ಸಾಕು ಹೆಚ್ಚಿಸಲು ಇಲ್ಲಿನ ಆಕರ್ಷಣೆ

ಕೂಣಗಲ್ಲು ಬೆಟ್ಟ

ನಗರದ ಗದ್ದಲ ಗುಲ್ಲು
ಮರೆಯಾಗಿಸುವುದು ಕೂಣಗಲ್ಲು
ಮಧ್ಯಾಹ್ನದ ಬಿಸಿಲಿನ ಝಳದಲ್ಲು
ತಂಪು ಹೆಬ್ಬಂಡೆಗಳ ಗುಹೆಯ ಕಲ್ಲು

ತುದಿಯಿಂದ ಕಾಣುವುದು ಬೆಟ್ಟಗಳ ಸಾಲು
ನಡುವೆ ಮಾವು ತೆಂಗಿನ ತೋಟಗಳ ಬಯಲು 
ಪರಿಶುದ್ಧಗಾಳಿ ಉಸಿರಿಗೆ ಸಿಗಲು
ಮೂಡುವುದು ಪ್ರಶಾಂತ ಭಾವ ಎಲ್ಲರ ಮನದಲ್ಲು


ಬೆಟ್ಟಕ್ಕೆ ಹೋಗುವ ದಾರಿ ಕೆಪಿ ದೊಡ್ಡಿ ರಸ್ತೆ



ಹೆಬ್ಬಂಡೆಗಳ ನಡುವೆ ತಂಪಾದ ಗುಹೆ


ಆಂಜನೇಯ ದೇವಸ್ಥಾನ


ಬೆಟ್ಟದ ಮೇಲಿನ ನಂದೀಶ್ವರ























Sunday, January 26, 2025

ಹುತ್ತರೀದುರ್ಗದ ಗುಹೆ





















ಹುತ್ತರೀದುರ್ಗದ ಬೆಟ್ಟದ ತುದಿಗೆ
ಹತ್ತುವ ಮಾರ್ಗದ ಗುಹೆಗೆ
ಕವಿದಿದೆ ಕತ್ತಲೆ ಒಳಗೆ
ಹೊಕ್ಕು ಹತ್ತಿದರೆ ಮೆಲ್ಲಗೆ
ಕಾಣ್ವದು ಬೆಳಕಿನ ಕಿಂಡಿಯ ಜಾಗೆ
ಇದ್ದರೆ ಮೈ ತುಸು ಸಣ್ಣಗೆ
ನುಸುಳಲು ಬಹುದು ಕಿಂಡಿಯ ಒಳಗೆ
ಹೊರಬಂದು ನೋಡಲು ಹೊರಗೆ
ಕಲ್ಲು ಕಾಣುವುದು ಛಾವಣಿಯ ಹಾಗೆ
ಮೊಗದಲ್ಲಿ ಇಣುಕುವುದು ಕಿರುನಗೆ
ಮೇಲೆ ಹತ್ತಿದರೆ ಕಲ್ಲಿಗೆ ತಲೆಚಚ್ಚಿಕೊಳ್ಳದಂಗೆ!